ADVERTISEMENT

ಸ್ತನ್ಯಪಾನದಿಂದ ಮಗುವಿನ ಜತೆ ತಾಯಿಗೂ ಲಾಭ

ಮಗುವಿನಲ್ಲಿ ರೋಗನಿರೋಧಕ ಶಕ್ತಿ, ತಾಯಿಯಲ್ಲಿ ಕ್ಯಾನ್ಸರ್‌ ನಿರೋಧಕ ಶಕ್ತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:49 IST
Last Updated 2 ಆಗಸ್ಟ್ 2019, 5:49 IST
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಗುರುವಾರ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ವತಿಯಿಂದ ನಡೆದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮವನ್ನು ತಾಯಂದಿರು ಉದ್ಘಾಟಿಸಿದರು.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಗುರುವಾರ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ವತಿಯಿಂದ ನಡೆದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮವನ್ನು ತಾಯಂದಿರು ಉದ್ಘಾಟಿಸಿದರು.   

ಮೈಸೂರು: ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಗುರುವಾರ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್’ ವತಿಯಿಂದ ನಡೆದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಕಾರ್ಯಕ್ರಮದಲ್ಲಿ ತಜ್ಞರು ಸ್ತನ್ಯಪಾನದ ಮಹತ್ವ ತಿಳಿಸಿದರು.

ಮಕ್ಕಳ ತಜ್ಞ ವೈದ್ಯ ಹಾಗೂ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸಮೂರ್ತಿ ಮಾತನಾಡಿ, ‘ಸ್ತನ್ಯಪಾನದಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಬಂದರೆ, ತಾಯಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ’ ಬರುತ್ತದೆ ಎಂದು ಹೇಳಿದರು.‌

ಮಗು ಜನಿಸಿದ ಒಂದು ಗಂಟೆಯ ಒಳಗೆ ಸ್ತನ್ಯಪಾನ ಮಾಡಿಸಬೇಕು. ಹಾಲು ಹೆಚ್ಚಾಗಿ ಬಾರದೇ ಕೆಲವೇ ಹನಿಗಳು ಬಂದರೂ ಅದನ್ನು ಕುಡಿಸಬೇಕು. ಮೊದಲ ಮೂರು ದಿನ ಬರುವ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ಮಗುವನ್ನು ಹಲವು ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ತಿಳಿಸಿದರು.

ADVERTISEMENT

ಮೊದಲ ಆರು ತಿಂಗಳ ಕಾಲ ಮಗುವಿಗೆ ತಾಯಿ ಹಾಲನ್ನು ಬಿಟ್ಟರೆ ಬೇರೆ ಯಾವುದೇ ಆಹಾರ ಅಥವಾ ಹಾಲನ್ನು ನೀಡಬಾರದು. 6 ತಿಂಗಳ ನಂತರವಷ್ಟೇ ತಾಯಿ ಹಾಲಿನ ಜತೆಗೆ ಸ್ವಲ್ಪ ಗಟ್ಟಿ ಆಹಾರ ನೀಡಬಾರದು. ಆಗ ಮಗು ಬಹುಪಾಲು ಕಾಯಿಲೆಗಳಿಂದ ರಕ್ಷಣೆ ಪಡೆಯುತ್ತದೆ ಎಂದು ವಿವರಿಸಿದರು.

ಕನಿಷ್ಠ ಎಂದರೂ 2 ವರ್ಷದವರೆಗೆ ಹಾಲು ಕುಡಿಸುವುದನ್ನು ಬಿಡಬಾರದು. ಮೊದಲ ಎರಡು ವರ್ಷಗಳ ಕಾಲ ಮಗುವಿನ ಮಿದುಳು ಬೆಳವಣಿಗೆಯಾಗುತ್ತಿರುತ್ತದೆ. ಈ ಹಂತದಲ್ಲಿ ತಾಯಿ ಹಾಲು ಮಿದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ತಾಯಿ ಹಾಲಿನ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಬೇಕು. ಅವರಲ್ಲಿ ಅರಿವು ಮೂಡಿಸಬೇಕು. ಸರ್ಕಾರ ರೂಪಿಸಿರುವ ಜಾಗೃತಿ ಕಾರ್ಯಕ್ರಮಗಳನ್ನು ಪುನರ್‌ವಿಮರ್ಶೆ ಮಾಡಿ, ಜನರಿಗೆ ಮುಟ್ಟುವಂತಹ ಕಾರ್ಯಕ್ರಮ ಮಾಡಬೇಕು ಎಂದು ಅವರು ತಿಳಿಸಿದರು.

ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಎಂ.ದಯಾನಂದ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕೆ.ಜಗದೀಶ್‌ಕುಮಾರ್, ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಸುಜಾತಾ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಅಧ್ಯಕ್ಷರಾದ ಡಾ.ರಾಜೇಶ್ವರಿ ಮಾದಪ್ಪ, ಕಾರ್ಯದರ್ಶಿ ಡಾ.ಎಚ್‌.ಸಿ.ಕೃಷ್ಣಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.