ADVERTISEMENT

ಸಾಲು ಸಾಲು ರಜೆ; ಹೆಚ್ಚುವರಿ ಬಸ್‌ಗಳಿಗೆ ಕೊರತೆ

ಒಟ್ಟು 403 ಬಸ್‌ಗಳು ಚುನಾವಣಾ ಕಾರ್ಯಕ್ಕೆ ಬಳಕೆ

ಕೆ.ಎಸ್.ಗಿರೀಶ್
Published 16 ಏಪ್ರಿಲ್ 2019, 20:21 IST
Last Updated 16 ಏಪ್ರಿಲ್ 2019, 20:21 IST

ಮೈಸೂರು: ಬುಧವಾರದಿಂದ ಭಾನುವಾರದವರೆಗೂ ಸಾಲು ಸಾಲು ರಜೆಗಳಿರುವುದರಿಂದ ಸಹಜವಾಗಿಯೇ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರವಾಸಿಗರ ದಂಡೇ ಬರುವ ನಿರೀಕ್ಷೆ ಇದೆ. ಆದರೆ, ಇವರಿಗೆ ಸಮಪರ್ಕವಾದ ಬಸ್‌ ಸೌಕರ್ಯ ಸಿಗುವುದು ಅನುಮಾನ ಎನಿಸಿದೆ.

ಏಪ್ರಿಲ್ 17ರಂದು ಮಹಾವೀರ ಜಯಂತಿ, 18ರಂದು ಮತದಾನದ ರಜೆ, 19ಕ್ಕೆ ಗುಡ್‌ಫ್ರೈಡೆ, 21 ಭಾನುವಾರದ ರಜೆ ಇದೆ. ಇವುಗಳ ನಡುವೆ 20ರಂದು ಒಂದು ದಿನ ಮಾತ್ರ ರಜೆ ಹಾಕಿದರೆ 5 ದಿನಗಳ ಕಾಲ ಸರಣಿ ರಜೆಗಳು ಸಿಗುತ್ತವೆ. ಇದರ ಲಾಭ ಪಡೆಯಲು ಈಗಾಗಲೇ ಹಲವು ಮಂದಿ ಯೋಜನೆ ರೂಪಿಸಿದ್ದಾರೆ. ಆದರೆ, ಇವರೆಲ್ಲ ಒಮ್ಮೆಗೆ ಬರುವುದಕ್ಕೆ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿಯಲ್ಲಿ ಹೆಚ್ಚಿನ ಬಸ್‌ಗಳು ಇಲ್ಲ. ಇರುವ ಹೆಚ್ಚುವರಿ ಬಸ್‌ಗಳೆಲ್ಲ ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿವೆ.

ಈಗಾಗಲೇ ಮೈಸೂರು ಗ್ರಾಮಾಂತರ ವಿಭಾಗದಿಂದ 190 ಹಾಗೂ ನಗರ ಸಾರಿಗೆ ವಿಭಾಗದಿಂದ 213 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ನೀಡಲಾಗಿದೆ. ಇದೇ ರೀತಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲಾ ಕೇಂದ್ರಗಳಿಂದಲೂ ಬಸ್‌ಗಳನ್ನು ನೀಡಲಾಗಿದೆ. ಸರಣಿ ರಜೆಯ ಪ್ರಯುಕ್ತ ಹಾಗೂ ರಾಜಕಾರಣಿಗಳ ಮನವಿಗೆ ಓಗೊಟ್ಟು ಮತದಾನ ಮಾಡಲು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಕಾರ್ಮಿಕರು ಹಾಗೂ ಅವರ ಕುಟುಂಬದವರು ಬರುವುದಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.

ADVERTISEMENT

‘ಒಟ್ಟು ಮೈಸೂರು ಗ್ರಾಮಾಂತರ ವಿಭಾಗದಲ್ಲಿ 700ಕ್ಕೂ ಹೆಚ್ಚಿನ ಬಸ್‌ಗಳಿವೆ. ಯಾವುದೇ ಮಾರ್ಗಗಳಲ್ಲೂ ಬಸ್‌ಗಳನ್ನು ಕಡಿತ ಮಾಡದೇ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇಲ್ಲ’ ಎಂದು ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಹೇಳುತ್ತಾರೆ.

ಆದರೆ, ಒಟ್ಟು 403 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದರಿಂದ ಸಹಜವಾಗಿಯೇ ಹೆಚ್ಚುವರಿ ಬಸ್‌ಗಳಲ್ಲಿ ಕೊರತೆ ಉಂಟಾಗಲಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾದಾಗ ನಿಯೋಜಿಸುವ ಬಸ್‌ಗಳಲ್ಲಿ ಕೊರತೆ ಆಗಲಿದೆ. ಇದರಿಂದ ಬಸ್‌ಗಳು ತುಂಬಿ ತುಳುಕುವ ಸಾಧ್ಯತೆ ಇದೆ.

ನಗರ ಸಾರಿಗೆ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಿರುವುದರಿಂದ ಸಹಜವಾಗಿಯೇ ಬಂದ ಪ್ರಯಾಣಿಕರು ತಮ್ಮ ತಮ್ಮ ಬಡಾವಣೆ ತಲುಪುವುದಕ್ಕೆ ತೊಂದರೆಯಾಗುವ ಸಂಭವ ಇದೆ. ಬಹಳ ಹೊತ್ತು ಬಸ್ಸಿಗಾಗಿ ಕಾಯಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಅಂಕಿ ಅಂಶ
403:ಒಟ್ಟು ಬಸ್‌ಗಳು ಚುನಾವಣಾ ಕಾರ್ಯಕ್ಕೆ
190:ಮೈಸೂರು ಗ್ರಾಮಾಂತರ ವಿಭಾಗದಿಂದ
213:ನಗರ ಸಾರಿಗೆ ವಿಭಾಗದಿಂದ

**

ಚುನಾವಣಾ ಕಾರ್ಯಕ್ಕೆ ಬಸ್‌ಗಳನ್ನು ನೀಡಿದ್ದರೂ ಪ್ರಯಾಣಿಕರ ದಟ್ಟಣೆ ಹೆಚ್ಚಾದಾಗ ತೊಂದರೆಯಾಗದ ರೀತಿ ಬಸ್‌ಗಳನ್ನು ನಿಯೋಜಿಸಲು ಪ್ರಯತ್ನಿಸಲಾಗುವುದು. ಪ್ರವಾಸಿಗರಿಗೆ ತೊಂದರೆಯಾಗುವ ಸಂಭವ ಕಡಿಮೆ‌
– ಅಶೋಕ್,ಕೆಎಸ್‌ಆರ್‌ಟಿಸಿಯ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.