ಎಚ್.ಡಿ.ಕೋಟೆ: ಎರಡನೇ ಬಾರಿ ಗೆಲುವು ಸಾಧಿಸಿದ ಅನಿಲ್ ಚಿಕ್ಕಮಾದು ಅವರನ್ನು ತಾಲ್ಲೂಕಿನ ಗಡಿಭಾಗದ ಕಂಚಮಳ್ಳಿಯಿಂದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಬೃಹತ್ ಹಾರ ಹಾಕಿ ಸ್ವಾಗತಿಸಿದರು.
ಹಂಪಾಪುರ, ಹೊಮ್ಮರಗಳ್ಳಿ, ಕೋಳಗಾಳ, ಗುಜ್ಜಪ್ಪನ ಹುಂಡಿ, ಮಾದಾಪುರ, ಹೈರಿಗೆ, ಮಟಕೆರೆ, ಬೊಪ್ಪನಹಳ್ಳಿ, ಹ್ಯಾಂಡ್ ಪೋಸ್ಟ್, ಕೃಷ್ಣಾಪುರ, ಗ್ರಾಮಗಳಲ್ಲಿ ದಾರಿಯುದ್ದಕ್ಕೂ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಭಿನಂದಿಸಿದರು. ಹ್ಯಾಂಡ್ ಪೋಸ್ಟ್, ಕೋಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಸಿಪ್ಪಪಾಜಿ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಅನಿಲ್ ಚಿಕ್ಕಮಾದು ಮಾಲಾರ್ಪಣೆ ಮಾಡಿದರು.
‘ನನ್ನ 5 ವರ್ಷದ ಅವಧಿಯಲ್ಲಿ ದಿ.ಆರ್.ಧ್ರುವನಾರಾಯಣ ಅವರ ಮಾರ್ಗದರ್ಶನದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ತಾಲ್ಲೂಕಿನ ಜನತೆ ತೋರಿದ ಪ್ರೀತಿ ವಿಶ್ವಾಸ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಗಳು, ನನ್ನ ಗೆಲುವಿಗೆ ಕಾರಣವಾಗಿ. ತಾಲ್ಲೂಕಿನಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಲಿರುವುದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಸಿಕ್ಕಿದೆ’ ಎಂದರು.
2018ರಲ್ಲಿ ಸ್ಪರ್ಧಿಸಿದಾಗ 22 ಸಾವಿರ ಅಂತರದಿಂದ ಗೆದ್ದಿದ್ದೆ. ಈ ಬಾರಿ ಮತ್ತೊಮ್ಮೆ 35 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿ ಪುನರಾಯ್ಕೆ ಮಾಡಿ ತಾಲ್ಲೂಕಿನಲ್ಲಿ 45 ವರ್ಷಗಳ ಇತಿಹಾಸ ಮರುಕಳಿಸಿದೆ ಎಂದರು.
1962ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ 14,788 ಮತ ಪಡೆದು ಆರ್.ಪೀರಣ್ಣ ಶಾಸಕರಾಗಿದ್ದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 18,818 ಮತಗಳೊಂದಿಗೆ ಗೆದ್ದಿದ್ದರು.
1972ರಲ್ಲಿ ಸ್ವತಂತ್ರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 21,859 ಮತಗಳನ್ನು ಪಡೆದು, ಸತತವಾಗಿ ವಿವಿಧ ಪಕ್ಷಗಳ ವಿವಿಧ ಚಿಹ್ನೆಗಳ ಮೂಲಕ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ನಂತರ ಯಾವುದೇ ಅಭ್ಯರ್ಥಿ ಸತತವಾಗಿ ಗೆಲುವು ಕಂಡಿರಲಿಲ್ಲ. ತಾಲ್ಲೂಕಿನ ಜನತೆ ನನಗೆ ಈ ಬಾರಿ 34,794 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಜಾಜ್ ಪಾಷಾ, ಮಾದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಹೋಂಡಾ ನಯಾಜ್, ಶಿವರಾಜು, ಚಿಕ್ಕವೀರ ನಾಯಕ, ಪಿ.ರವಿ ನಂದಿನಿ, ಮಂಜುನಾಥ್, ಭಾಗ್ಯಲಕ್ಷ್ಮಿ, ಸತೀಶ್ ಗೌಡ, ಈರೇಗೌಡ, ಸೋಮೇಶ್, ಎಚ್.ಸಿ.ನರಸಿಂಹಮೂರ್ತಿ, ಕ್ಯಾತನಹಳ್ಳಿ ನಾಗರಾಜ್, ರಾಜು, ರಾಜ ನಾಯಕ, ಪರಶಿವಮೂರ್ತಿ, ಶಂಭುಲಿಂಗ ನಾಯಕ, ಪ್ರದೀಪ್, ಗಣೇಶ್ ಆಚಾರ್, ವೀರೇಂದ್ರ, ಶಿವರಾಜು ಬಿ.ಪಿ.ಭಾಸ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.