ADVERTISEMENT

ವಿಧಿಯ ಅಟ್ಟಹಾಸಕ್ಕೆ ಮರುಗಿದ ಜನ

ಉದ್ಯಮಿ ಓಂಪ್ರಕಾಶ್ ನಿವಾಸದ ಮುಂದೆ ಮುಗಿಲು ಮುಟ್ಟಿದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:38 IST
Last Updated 18 ಆಗಸ್ಟ್ 2019, 5:38 IST

ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿರುವ ಉದ್ಯಮಿ ಓಂಪ್ರಕಾಶ್ ಭಟ್ಟಾಚಾರ್ಯ ಅವರ ನಿವಾಸದ ಮುಂದೆ ಶನಿವಾರ ಶೋಕ ಮಡುಗಟ್ಟಿತ್ತು. ಸೇರಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ದುರ್ವಿಧಿಯ ಅಟ್ಟಹಾಸಕ್ಕೆ ಬಲಿಯಾದ ಐವರ ಮೃತದೇಹಗಳನ್ನು ಕಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಒಬ್ಬೊಬ್ಬರ ಶವಗಳನ್ನು ನೋಡುತ್ತಿದ್ದಾಗಲೂ ಓಂಪ್ರಕಾಶ್ ಅವರ ಸೋದರಿ ಬಿಕ್ಕುತ್ತಿದ್ದರು. 5 ವರ್ಷದ ಆರ್ಯನ್ ಮೃತದೇಹ ಕಂಡಾಗಲಂತೂ ಅವರ ಮಡುಗಟ್ಟಿದ್ದ ದುಃಖದ ಕಟ್ಟೆಯೊಡೆಯಿತು. ಅಲ್ಲಿ ಯಾರನ್ನು ಯಾರೂ ಸಂತೈಸುವ ಸ್ಥಿತಿಯಲ್ಲಿರಲಿಲ್ಲ.

‘ಅನಂತಪದ್ಮನಾಭ ನಿಲಯ’ ಎಂಬ ಹೆಸರಿನ ಈ ಮನೆಯ ಆವರಣದಲ್ಲಿ ಪೊಲೀಸರು ಬಂದಾಗ ನೀರವ ಮೌನ ನೆಲೆಸಿತ್ತು. ಇನ್‌ಸ್ಪೆಕ್ಟರ್ ಎಚ್.ಆರ್.ಬಾಲಕೃಷ್ಣ ಅವರ ನೇತೃತ್ವದ ವಿಶೇಷ ಪೊಲೀಸ್ ತನಿಖಾ ತಂಡವು ಬೀಗ ಒಡೆದು ಅರ್ಧ ಗಂಟೆ ಕಾಲ ಮನೆಯನ್ನು ಜಾಲಾಡಿತು. ಇವೆಲ್ಲವೂ ಒಂದು ರೀತಿಯ ವಿಲಕ್ಷಣ ಪ್ರಸಂಗದಂತೆ ಬಡಾವಣೆಯ ನಿವಾಸಿಗಳಿಗೆ ಕಂಡಿತು.

ADVERTISEMENT

‘ಅಂದು ನೀನು ಸಾರಿ ಅಕ್ಕ’ ಎಂದಿದ್ದು ಏಕೆ ಎಂದು ಈಗ ಅರಿವಾಯಿತು. ಅಂದು ಗೊತ್ತಾಗಲೇ ಇಲ್ಲ’ ಎಂದು ಎದೆಬಿರಿಯುವಂತೆ ಅವರ ಸೋದರಿ ದುಃಖಿಸುವುದನ್ನು ಕಂಡು ಸೇರಿದ್ದ ಜನಸ್ತೋಮ ಮಮ್ಮಲ ಮರುಗಿತು.

ವೈಷ್ಣವ ಸಂಪ್ರದಾಯದಂತೆ ಎಲ್ಲ ಮೃತದೇಹಗಳಿಗೆ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.