ADVERTISEMENT

ಪರ್ಯಾಯ ಅಧಿವೇಶನ ನಡೆಸಲು ನಿರ್ಧಾರ

ಸೆ.16ರಿಂದ ಶಾಸಕರು, ಸಚಿವರ ಮನೆಯ ಮುಂದೆ ಧರಣಿ: ಕುರುಬೂರು ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 15:31 IST
Last Updated 12 ಸೆಪ್ಟೆಂಬರ್ 2020, 15:31 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸೆ.21ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪರ್ಯಾಯ ಜನತಾ ಅಧಿವೇಶನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ‌ತಿಳಿಸಿದರು.

ಈ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳು, ಸಾಮಾನ್ಯ ಜನರು, ಹೋರಾಟಗಾರರು, ಸಾಹಿತಿಗಳು ಭಾಗಿಯಾಗಲಿದ್ದಾರೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ಎಲ್ಲ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ 1989ರಲ್ಲಿ ಶಾಸಕರಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬೇಕು ಎಂದು ನಮ್ಮೊಡನೆ ಫಲಕ ಹಿಡಿದು ಹೋರಾಟ ನಡೆಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿ ಉಚಿತ ವಿದ್ಯುತ್‌ ಅನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ರೈತರ ಸಮಸ್ಯೆಗಳನ್ನು ಆಲಿಸಲು ಸಭೆ ಕರೆಯುವಂತೆ ಪತ್ರ ಬರೆದರೂ, ಉಸ್ತುವಾರಿ ಸಚಿವರು ಸೇರಿದಂತೆ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ, ಸೆ.16ರಂದು ಎಲ್ಲ ಶಾಸಕರು ಮತ್ತು ಸಚಿವರ ನಿವಾಸಗಳ ಎದುರು ಧರಣಿ ನಡೆಸಲಾಗುವುದು’ ಎಂದು ತಿಳಿಸಿದರು.

ನಂತರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲೂ ರೈತರು ಕಪ್ಪುಬಾವುಟ ಪ್ರದರ್ಶಿಸಲಿದ್ದಾರೆ. ಇನ್ನಾದರೂ ಸಚಿವರು ಎಚ್ಚೆತ್ತುಕೊಂಡು ಸಭೆ ಕರೆದು ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಹೋರಾಟವು ಯಾವುದೇ ರಾಜಕೀಯ ಪಕ್ಷಗಳ ಸೋಂಕು ಇಲ್ಲದೇ ನಡೆಯುತ್ತಿದೆ. ಎಲ್ಲ ರಾಜಕಾರಣಿಗಳೂ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ, ರಾಜಕೀಯ ಪಕ್ಷಗಳ ಮರ್ಜಿಗೆ ಒಳಪಡದೇ ಈ ಬಾರಿ ಹೋರಾಟ ರೂಪಿಸಲಾಗಿದೆ ಎಂದರು.

ಮುಖಂಡರಾದ ಆಲಗೂಡು ಶಿವಕುಮಾರ್, ಕೆ.ಎಸ್.ದೊಡ್ಡಣ್ಣ, ರಾಜಶೇಖರ ಕೋಟೆ, ಅನಿಲ್‌ಕುಮಾರ್, ಪುನೀತ್‌, ರಾಜೇಂದ್ರ ಜಗನ್ನಾಥ್, ಕಲ್ಲಹಳ್ಳಿ ಕುಮಾರ್, ವರದಯ್ಯ, ಅತ್ತಹಳ್ಳಿ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.