ADVERTISEMENT

ರೈತರ ಬವಣೆ, ನಿರುದ್ಯೋಗವೇ ಪ್ರಧಾನ ವಿಚಾರ

2019ರ ಲೋಕಸಭೆ ಚುನಾವಣೆ ಪೈಪೋಟಿ–ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌ ಮಾತು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:28 IST
Last Updated 23 ಡಿಸೆಂಬರ್ 2018, 17:28 IST
ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್‌   

ಮೈಸೂರು: ರೈತರ ಬವಣೆ ಹಾಗೂ ನಿರುದ್ಯೋಗ ವಿಚಾರದ ಮೇಲೆಯೇ 2019ರ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಇಲ್ಲಿ ಭಾನುವಾರ ತಿಳಿಸಿದರು.

‘ಇಡೀ ದೇಶ ಈಗ ರೈತರ ಮಾತಿಗೆ ಕಿವಿಕೊಡುತ್ತಿದೆ. ಮೂರು ವರ್ಷಗಳಿಂದ ರೈತರ ವಿಚಾರದಲ್ಲಿ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ತುಟಿ ಬಿಚ್ಚಿದ್ದಾರೆ. ವಿರೋಧ ಪಕ್ಷಗಳು ಕೂಡ ರೈತರ ಬಗ್ಗೆ ಮಾತನಾಡುತ್ತಿವೆ. 30 ವರ್ಷಗಳಲ್ಲಿ ಮೊದಲ ಬಾರಿ 200 ವಿವಿಧ ರೈತ ಸಂಘಟನೆಗಳು ಒಂದೇ ವೇದಿಕೆಯಡಿ ಒಟ್ಟುಗೂಡಿವೆ. ತಮ್ಮ ಹಕ್ಕು ವಿಚಾರದಲ್ಲಿ ಇದುವರೆಗೆ ಹೋರಾಡುತ್ತಿದ್ದವರು ಈಗ ಬದಲಾವಣೆಗಾಗಿ ಬೀದಿಗಿಳಿದಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಿರುದ್ಯೋಗ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ನಿರುದ್ಯೋಗಿ ಪದವೀಧರರು ಇದ್ದಾರೆ. ಬೇರೆ ದೇಶಗಳಲ್ಲಿ ಈ ಪ್ರಮಾಣದಲ್ಲಿ ನಿರುದ್ಯೋಗಿಗಳು ಇದ್ದಿದ್ದರೆ ದೊಡ್ಡ ಕ್ರಾಂತಿಯೇ ನಡೆದಿರುತಿತ್ತು’ ಎಂದರು.

ADVERTISEMENT

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಸಮಯದಲ್ಲಿ ಉದ್ಯೋಗರಹಿತ ಬೆಳವಣಿಗೆ ಆಗಿತ್ತು. ಬಿಜೆಪಿ ಸಾರಥ್ಯದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ನಷ್ಟದ ಬೆಳವಣಿಗೆ ಆಗಿದೆ‌. ಹೀಗಾಗಿಯೇ, ಯುವಕರು ಬೀದಿಗಿಳಿದಿದ್ದಾರೆ’ ಎಂದು ನುಡಿದರು.

‘ರೈತರ ಬವಣೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಮರೆ ಮಾಚಲು ಬಿಜೆಪಿ ಷಡ್ಯಂತ್ರ ನಡೆಸಿದೆ. ರಾಮ ಮಂದಿರ ನಿರ್ಮಾಣ ವಿಚಾರವನ್ನು ಮತ್ತೆ ಕೈಗೆತ್ತಿಕೊಂಡಿದೆ’ ಎಂದು ತಿಳಿಸಿದರು.

‘ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಧಾನಿ ಮೋದಿ ನಿದ್ರಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈಚೆಗೆ ಹೇಳಿದ್ದಾರೆ. ಪಂಜಾಬ್‌, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವು ರೈತರಿಗೆ ನೀಡಿರುವ ಭರವಸೆ ಪೂರ್ಣಗೊಳ್ಳುವವರಗೆ ರಾಹುಲ್‌ ಕೂಡ ನಿದ್ರಿಸಬಾರದು’ ಎಂದು ಹೇಳಿದರು.

ಸ್ವರಾಜ್ಯ ಇಂಡಿಯಾ ಕರ್ನಾಟಕ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್‌, ಸ್ವರಾಜ್‌ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅಭಿಕ್‌ ಸಹಾ, ಸಾಹಿತಿ ದೇವನೂರ ಮಹಾದೇವ, ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ, ನಂಜುಂಡಸ್ವಾಮಿ, ರಶ್ಮಿ, ಅಮ್ಜದ್‌ ಪಾಷಾ, ಶಬ್ಬೀರ್‌ ಮುಸ್ತಫಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.