ADVERTISEMENT

ಮೈಸೂರು: ಮೊದಲ ಫ್ಲೈಓವರ್ ಶೀಘ್ರದಲ್ಲೇ ಸಿದ್ಧ

ಇನ್ನೊಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ

ಮಹಮ್ಮದ್ ನೂಮಾನ್
Published 31 ಅಕ್ಟೋಬರ್ 2018, 7:43 IST
Last Updated 31 ಅಕ್ಟೋಬರ್ 2018, 7:43 IST
ಹಿನಕಲ್‌ ಜಂಕ್ಷನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಓವರ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ
ಹಿನಕಲ್‌ ಜಂಕ್ಷನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಓವರ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ   

ಮೈಸೂರು: ಹಲವು ಸಲ ಗಡುವು ವಿಸ್ತರಣೆಯಾಗಿ, ಕುಂಟುತ್ತಲೇ ಸಾಗಿದ ನಗರದ ಮೊದಲ ಫ್ಲೈಓವರ್‌ ನಿರ್ಮಾಣ ಕಾಮಗಾರಿ ಕೊನೆಹಂತ ತಲುಪಿದ್ದು, ಇನ್ನೊಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಹೊರವರ್ತುಲ ರಸ್ತೆ ಮತ್ತು ಮೈಸೂರು– ಹುಣಸೂರು ರಸ್ತೆ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ನಾಡಹಬ್ಬದ ಸಮಯದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಆ ಬಳಿಕ ಎರಡು ವಾರಗಳಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರು.

ಆದರೆ ದಸರಾ ಕಳೆದಿದ್ದರೂ ಕಾಮಗಾರಿ ಕೊನೆಗೊಂಡಿಲ್ಲ. ಹುಣಸೂರು ರಸ್ತೆಯು ರಿಂಗ್‌ ರಸ್ತೆಯನ್ನು ಕೂಡುವವರೆಗೆ ಎರಡೂ ಕಡೆಗಳಿಂದ ನಿರ್ಮಾಣ ಕಾಮಗಾರಿ ಕೆಲ ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು.

ADVERTISEMENT

ರಿಂಗ್‌ ರಸ್ತೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ಅಲ್ಪ ತಡವಾಗಿದೆ. ಇಲ್ಲಿ ಪಿಲ್ಲರ್‌ ನಿರ್ಮಿಸಿ, ಕಾಂಕ್ರೀಟ್‌ ತೊಲೆಗಳನ್ನು ಅಳವಡಿಸಿ ಅದರ ಮೇಲೆ ಕಾಂಕ್ರೀಟ್‌ ಹಾಸು ಹಾಕಲಾಗಿದೆ. ಕ್ಯೂರಿಂಗ್‌ಗೆ ಹೆಚ್ಚು ದಿನಗಳು ಬೇಕಾದ್ದರಿಂದ ದಸರಾ ವೇಳೆಗೆ ವಾಹನ ಸಂಚಾರ ಸಾಧ್ಯವಾಗಿರಲಿಲ್ಲ.

ಸುಮಾರು 800 ಮೀ. ಉದ್ದದ ಫ್ಲೈಓವರ್‌ಗೆ ಮೊದಲ ಹಂತದ ಡಾಂಬರು ಹಾಕುವ ಕೆಲಸ ಪೂರ್ಣಗೊಂಡಿದ್ದು, ವಿಭಜಕದಲ್ಲಿ (ಮೀಡಿಯನ್‌) ಮಣ್ಣು ತುಂಬುವ ಕೆಲಸ ನಡೆಯುತ್ತಿದೆ. ಈ ಕೆಲಸ ಇನ್ನೆರಡು ದಿನಗಳಲ್ಲಿ ಕೊನೆಗೊಳ್ಳಲಿದೆ.

‘ಒಂದು ಹಂತದ ಡಾಂಬರೀಕರಣ ಮುಗಿದಿದೆ. ಮೀಡಿಯನ್‌ಗೆ ಮಣ್ಣು ತುಂಬಿ ಸಮತಟ್ಟು ಮಾಡಿದ ಬಳಿಕ ಅಂತಿಮ ಹಂತದ ಡಾಂಬರೀಕರಣ ನಡೆಯಲಿದೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸುರೇಶ್‌ ಬಾಬು ತಿಳಿಸಿದರು.

ಫ್ಲೈಓವರ್‌ ಇನ್ನೊಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸುವ ಸಂಬಂಧ ಚರ್ಚೆ ನಡೆದಿದೆ. ಉಪಚುನಾವಣೆ ಬಳಿಕ ಉದ್ಘಾಟನಾ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಈ ಫ್ಲೈಓವರ್‌ ಸಂಚಾರಕ್ಕೆ ಮುಕ್ತವಾದರೆ ಮೈಸೂರು ನಗರದಿಂದ ಹುಣಸೂರು, ಮಡಿಕೇರಿ, ಹಾಸನ, ಮಂಗಳೂರು ಕಡೆಗೆ ತೆರಳುವ ವಾಹನಗಳು ಮತ್ತು ಆ ಕಡೆಗಳಿಂದ ಮೈಸೂರಿಗೆ ಬರುವ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಬಹುದು. ರಿಂಗ್‌ ರಸ್ತೆಯಲ್ಲಿ ಸಾಗುವ ವಾಹನಗಳೂ ಇನ್ನು ಮುಂದೆ ಸಿಗ್ನಲ್‌ನಲ್ಲಿ ಕಾಯುವ ಅವಶ್ಯತೆಯಿರುವುದಿಲ್ಲ.

2016ರ ಜುಲೈನಲ್ಲಿ ಆರಂಭ: ಹಿನಕಲ್‌ ಜಂಕ್ಷನ್‌ನಲ್ಲಿ ವಾಹನದಟ್ಟನೆ ತಗ್ಗಿಸುವ ಉದ್ದೇಶದಿಂದ ಮುಡಾ ವತಿಯಿಂದ ಗ್ರೇಡ್ ಸಪರೇಟರ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹ 19 ಕೋಟಿ ವೆಚ್ಚದ ಕಾಮಗಾರಿ 2016ರ ಜುಲೈನಲ್ಲಿ ಆರಂಭವಾಗಿತ್ತು.

ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ನಿಗದಿತ ಗಡುವಿನ ಒಳಗಾಗಿ ಪೂರ್ಣಗೊಂಡಿರಲಿಲ್ಲ. ನಿರ್ಮಾಣ ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಸಾರ್ವಜನಿಕರು ಮತ್ತು ಪ್ರಯಾಣಿಕರು ಪರದಾಡುವಂತಾಗಿತ್ತು.

ಬೆಳಿಗ್ಗೆ ಹಾಗೂ ಸಂಜೆ ಇಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು. ರಿಂಗ್‍ ರಸ್ತೆಯನ್ನು ದಾಟುವಷ್ಟರಲ್ಲಿ ವಾಹನ ಚಾಲಕರು ಮತ್ತು ಪ್ರಯಾಣಿಕರು ಹೈರಾಣಾಗುತ್ತಿದ್ದರು. ಕಾಮಗಾರಿಗೆಂದು ಈ ಮಾರ್ಗದ ಸಂಚಾರದಲ್ಲಿ ಅಲ್ಪ ಬದಲಾವಣೆಯನ್ನೂ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.