ADVERTISEMENT

ಪಂಚಮಸಾಲಿ ಶ್ರೀ ಜನರಲ್ಲಿ ಅಶಾಂತಿ ಮೂಡಿಸದಿರಲಿ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 13:10 IST
Last Updated 12 ಡಿಸೆಂಬರ್ 2024, 13:10 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಮೀಸಲಾತಿ ವಿಚಾರದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಯಾವುದೇ ಮಠಾಧೀಶರೂ ಜನರಲ್ಲಿ ಅಶಾಂತಿ ಮೂಡಿಸುವುದು ಹಾಗೂ ಅಪನಂಬಿಕೆ ಬಿತ್ತುವ ಕೆಲಸ ಮಾಡಲೇಬಾರದು. ಅದು ನಾಡಿಗೆ ಒಳ್ಳೆಯದಲ್ಲ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಪ್ರತಿಪಾದಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತ ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗ 2ಎಗೆ ಸೇರಿಸುವಂತೆ ಹೋರಾಡುತ್ತಿದ್ದಾರೆ. ಆದರೆ, 2ಎನಲ್ಲಿ ಸೇರಿಕೊಳ್ಳಲು ಜಾಗ ಎಲ್ಲಿದೆ? ಎಲ್ಲವೂ ಮುಗಿದು ಹೋಗಿದೆ. ಯಾರ‍್ಯಾರೋ ಆ ಜಾತಿಯ ಪ್ರಮಾಣಪತ್ರ ತೆಗೆದುಕೊಳ್ಳುತ್ತಿದ್ದಾರೆ’ ಎಂದರು.

‘ಆರಂಭದಲ್ಲಿ ಹಿಂದುಳಿದ ವರ್ಗ 2ಎ ಪ್ರವರ್ಗದಲ್ಲಿ 15 ಜಾತಿಗಳಷ್ಟೇ ಇದ್ದವು. ಈಗ, 40ರಿಂದ 50 ಸೇರಿಕೊಂಡಿವೆ. ಸರ್ಕಾರ ಇದನ್ನು ಪರಾಮರ್ಶಿಸಬೇಕು. ಈ ವರ್ಗದ ಮೀಸಲಾತಿ ಎಂಬುದು ಧೂಳೀಪಟವಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯಮಂತ್ರಿ ಇದನ್ನು ಗಮನಿಸಬೇಕು. ಸಂವಿಧಾನ ಎಂದೆಲ್ಲಾ ಸುಮ್ಮನೆ ಭಾಷಣ ಮಾಡಿದರೆ ಪ್ರಯೋಜನವಾಗದು’ ಎಂದರು.

ADVERTISEMENT

‘ನಮಗಿರುವ ಹಿಂದುಳಿದ ವರ್ಗ 2ಎ ಮೀಸಲಾತಿಯನ್ನು ಕೂಡಲಸಂಗಮ ಸ್ವಾಮೀಜಿಯು ಕಿತ್ತುಕೊಂಡು ಬಿಡಲಿ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಬಿಡಲಿ. ಅಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಿ. ಬಳಿಕ, ಹಿಂದುಳಿದ ವರ್ಗ 2ಎ ಪಡೆದುಕೊಳ್ಳಲಿ. ಈಗಿನ ಸ್ಥಿತಿಯಲ್ಲಿ ಸುಮ್ಮನೆ ಎಲ್ಲರಿಗೂ ತೊಂದರೆ ಕೊಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.