ADVERTISEMENT

ಮುಸ್ಲಿಮರ ಮತಕ್ಕಾಗಿ ಎಚ್‌ಡಿಕೆ, ಸಿದ್ದರಾಮಯ್ಯ ಪೈಪೋಟಿ: ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 9:59 IST
Last Updated 7 ಏಪ್ರಿಲ್ 2022, 9:59 IST
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಮೈಸೂರು: ‘ಅಲ್ಪಸಂಖ್ಯಾತರ ಧ್ವನಿ ನಾನಾ, ನೀನಾ ಎಂಬ ವಿಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಸ್ಪರ್ಧೆ ಶುರುವಾಗಿದೆ. ಮತಗಳಿಕೆ ವ್ಯಾಪಾರದಲ್ಲಿ ಸಕ್ರಿಯರಾಗಿರುವುದರಿಂದ ಇಬ್ಬರೂ, ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟೀಕಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ವಿರೋಧ ಪಕ್ಷಗಳು ಟೀಕಿಸುವಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನಿ ಅಲ್ಲ. ಎಲ್ಲ ವಿಚಾರಗಳಲ್ಲೂ ಅವರು ಸ್ಪಷ್ಟತೆಯಿಂದ ಮಾತನಾಡಬಲ್ಲರು. ಕಾಂಗ್ರೆಸ್‌, ಜೆಡಿಎಸ್‌ನವರಿಗೆ ಕಾನೂನು, ಪ್ರಜಾಪ್ರಭುತ್ವ ಅಂದರೆ ಏನೆಂಬುದೇ ಗೊತ್ತಿಲ್ಲ. ನಾವು ಸಮಾಜದ ಏಳಿಗೆಗೆ ಕೆಲಸ ಮಾಡಿದರೆ, ಅವರು ಕುಟುಂಬಕ್ಕಾಗಿ ಕೆಲಸ ಮಾಡುವರು’ ಎಂದು ತಿರುಗೇಟು ನೀಡಿದರು.

‘ಸರ್ಕಾರವು ಕಾನೂನಿಗೆ ವಿರುದ್ಧವಾದ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಓಲೈಕೆ ರಾಜಕಾರಣ ನಮ್ಮದಲ್ಲ. ಎಲ್ಲ ಜಾತಿ, ಧರ್ಮದವರನ್ನೂ ಒಂದೇ ಎಂಬ ಭಾವನೆಯಿಂದ ನೋಡುತ್ತೇವೆ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಸಿದ್ದರಾಮಯ್ಯ ಹೇಳಿಕೆ ಖಂಡಿಸುವೆ: ‘ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ ಹೊಗಳಿ ಅಲ್‌ಕೈದಾ ಮುಖ್ಯಸ್ಥ ನೀಡಿದ್ದ ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸಬೇಕಿತ್ತು. ಆ ಕೆಲಸ ಮಾಡದೆ, ಇದರ ಹಿಂದೆ ಸಂಘದ ಕೈವಾಡ ಇದೆ ಅನ್ನುತ್ತಾರಲ್ಲಾ? ಸಮಾಜದಲ್ಲಿ ಗೊಂದಲ, ಅಪನಂಬಿಕೆ ಹುಟ್ಟಿಸುವ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಬಾಲಿಶ ಹೇಳಿಕೆ ಅವರ ನಾಯಕತ್ವಕ್ಕೆ ಸರಿಹೊಂದಲ್ಲ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.