ADVERTISEMENT

ಮೈಸೂರು: ಹೆಡ್‌ಕಾನ್‌ಸ್ಟೆಬಲ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:45 IST
Last Updated 4 ಮಾರ್ಚ್ 2021, 3:45 IST

ಮೈಸೂರು: ನಗರ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್ ಹೇಮೇಶ್ ಆರಾಧ್ಯ (43) ಅವರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿನ ಸರ್ದಾರ್‌ ವಲ್ಲಭಬಾಯ್ ಪಟೇಲ್ ನಗರದಲ್ಲಿ ವಾಸವಿದ್ದ ಇವರು ಅರಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮದುವೆಯೊಂದರಲ್ಲಿ ದಂಪತಿ ಸಮೇತ ಪಾಲ್ಗೊಂಡು ಮನೆಗೆ ಬಂದ ಇವರು ಕೆಲಕಾಲ ಹೊರಗೆ ಹೋಗಿ ಬಂದಿದ್ದಾರೆ. ಮನೆಗೆ ಬಂದ ನಂತರ ಇವರು ಪತ್ನಿಗೆ ಅಡುಗೆ ಮಾಡಲು ಹೇಳಿ ತಮ್ಮ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಬಾಗಿಲು ತೆಗೆಯದೇ ಇದ್ದದ್ದನ್ನು ಕಂಡ ಪತ್ನಿ ಅಕ್ಕಪಕ್ಕದವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಇವರು ಕಿಟಕಿಯ ಸರಳಿಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪತ್ನಿ ಸಮಾಧಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ
ಹುಣಸೂರು:
ತಾಲ್ಲೂಕಿನ ಹೊಸರಾಮೇನಹಳ್ಳಿ ಗ್ರಾಮದ ಸಿದ್ದಪ್ಪಾಜಿ ನಾಯಕ ಅವರು 2 ದಿನಗಳ ಹಿಂದೆಯಷ್ಟೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ ಅನಿತಾ ಅವರ ಸಮಾಧಿ ಮುಂದೆ ವಿಷ ಸೇವಿಸಿ ಬುಧವಾರ ಮೃತಪಟ್ಟಿದ್ದಾರೆ. ‌

ದಂಪತಿಯ ನಡುವೆ ಈಚೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಇದರಿಂದ ಬೇಸರಗೊಂಡ ಅನಿತಾ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಇವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಮಂಗಳವಾರ ಸಿದ್ದಪ್ಪಾಜಿ ನಾಯಕ ಸಹ ವಿಷ ಸೇವಿಸಿದರು. ನಂತರ, ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಇವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಗೆ 6 ವರ್ಷದ ಪುತ್ರ, 4 ವರ್ಷ ಪುತ್ರಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಿಳಿಕೆರೆ ಠಾಣೆಯಲ್ಲಿ ದಾಖಲಾಗಿದೆ.

ವಂಚಕನ ಬಂಧನ
ಮೈಸೂರು:
ಚಿನ್ನದ ಆಭರಣಗಳನ್ನು ಅಡವಿಟ್ಟುಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿ ಚಿನ್ನ ಪಡೆದು ವಾಪಸ್ ಕೊಡದೇ ವಂಚಿಸಿದ್ದ ಆರೋಪಿ ಮಂಜುನಾಥ್ ಎಂಬಾತನನ್ನು ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ₹ 22.25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಈತ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ಇದನ್ನು ನಂಬಿ ನಿಂಗಮ್ಮ ಎಂಬುವವರು ಈತನಿಗೆ ಚಿನ್ನ ನೀಡಿದ್ದರು. ನಂತರ, ಈತ ತನ್ನ ಅಂಗಡಿಯನ್ನು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.