ADVERTISEMENT

ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ಸೇಠ್ ಸ್ಥಿತಿ ಗಂಭೀರವಾಗುತ್ತಿತ್ತು

ಎನ್.ಆರ್.ಕ್ಷೇತ್ರದಲ್ಲಿ ‘ಕೂಬಿಂಗ್’ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 9:49 IST
Last Updated 19 ನವೆಂಬರ್ 2019, 9:49 IST
   

ಮೈಸೂರು: ಹಲ್ಲೆಗೆ ಒಳಗಾದ ಶಾಸಕ ತನ್ವೀರ್‌ಸೇಠ್‌ ಅವರಿಗೆ ಚಿಕಿತ್ಸೆ ನೀಡಿದ ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯರ ತಂಡವನ್ನು ಸಚಿವ ವಿ.ಸೋಮಣ್ಣ ಸೇರಿದಂತೆ ಆಸ್ಪತ್ರೆಗೆ ಭೇಟಿ ನೀಡಿದ ಗಣ್ಯರು ಶ್ಲಾಘಿಸಿದರು.

ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ, ತಜ್ಞ ವೈದ್ಯರಾದ ಮಕ್ಸೂದ್ ಹಾಗೂ ದತ್ತಾತ್ರಿ ಅವರು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ತನ್ವೀರ್‌ಸೇಠ್ ಬದುಕುಳಿಯುವುದು ಕಷ್ಟವಾಗುತ್ತಿತ್ತು ಎಂದು ಸೋಮಣ್ಣ ತಿಳಿಸಿದರು.‌

ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿ, ‘ತನ್ವೀರ್‌ಸೇಠ್‌ ಅವರು ನನ್ನನ್ನು ನೋಡಿದಾಕ್ಷಣ ಅಕ್ಕನನ್ನು ಕೇಳಿದೆ ಎಂದು ಹೇಳಿ ಎಂದು ಕೈ ಹಿಡಿದುಕೊಂಡರು. ಅವರಿಗೆ ಪ್ರಜ್ಞೆ ಚೆನ್ನಾಗಿದೆ. ಯಾವುದೇ ಅಪಾಯ ಆಗಿಲ್ಲ’ ಎಂದು ಹೇಳಿದರು.

ADVERTISEMENT

ಆಸ್ಪತ್ರೆಗೆ ಸಚಿವ ಶ್ರೀರಾಮುಲು, ಮುಖಂಡರಾದ ಯು.ಟಿ.ಖಾದರ್, ಧ್ರುವನಾರಾಯಣ, ಸಂದೇಶ್‌ ನಾಗರಾಜ್ ಹಾಗೂ ಇತರ ಮುಖಂಡರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಎನ್.ಆರ್.ಕ್ಷೇತ್ರದಲ್ಲಿ ಕೂಬಿಂಗ್ ನಡೆಸಲಿ– ಪ್ರತಾಪಸಿಂಹ

ಎನ್.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಪೋಲಿ ಪುಂಡರ ಹಾವಳಿ ಹೆಚ್ಚಾಗಿದೆ. ಪೊಲೀಸರು ಕೂಡಲೇ ಕೂಬಿಂಗ್ ನಡೆಸಿ, ಸಮಾಜ ಘಾತುಕ ಶಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಹಿಂದೆ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜು ಅವರ ಹತ್ಯೆಯಾಯಿತು. ಈಗ ತನ್ವೀರ್‌ಸೇಠ್‌ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಲೇ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.