ADVERTISEMENT

ಸಂವಿಧಾನದಂತೆ ನಡೆಯಲು ಕರೆ

‘ಸಂವಿಧಾನ ಓದು’ ಕಾರ್ಯಕ್ರಮದಲ್ಲಿ ತುಂಬಿ ತುಳುಕಿದ ಕಲಾಮಂದಿರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 9:20 IST
Last Updated 22 ಆಗಸ್ಟ್ 2019, 9:20 IST
ಮೈಸೂರಿನ ಕಲಾಮಂದಿರದಲ್ಲಿ ಬುಧವಾರ ನಡೆದ ‘ಸಂವಿಧಾನದ ಓದು: ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಜತೆ ಮಾತನಾಡಿದ ರು.
ಮೈಸೂರಿನ ಕಲಾಮಂದಿರದಲ್ಲಿ ಬುಧವಾರ ನಡೆದ ‘ಸಂವಿಧಾನದ ಓದು: ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಜತೆ ಮಾತನಾಡಿದ ರು.   

ಮೈಸೂರು: ‘ಎಲ್ಲರೂ ಸಂವಿಧಾನ ಓದಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು’ ಎಂದು ಇಲ್ಲಿನ ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬುಧವಾರ ನಡೆದ ‘ಸಂವಿಧಾನ ಓದು: ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಗಣ್ಯರೆಲ್ಲರೂ ಒಕ್ಕೊರಲಿನಿಂದ ಕರೆ ನೀಡಿದರು.

ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ಕಾನೂನು ನಮ್ಮನ್ನು ನಿಯಂತ್ರಿಸುತ್ತದೆ. ಇಂತಹ ನೂರಾರು ಕಾನೂನುಗಳ ತಾಯಿ ಭಾರತ ಸಂವಿಧಾನ. ಈ ತಾಯಿ ತೋರಿಸಿದ ದಾರಿಯಲ್ಲಿ ಸಾಗಿದರೆ ಎಲ್ಲರಿಗೂ ಒಳ್ಳೆಯದು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಕಿವಿಮಾತು ಹೇಳಿದರು.

ಬುದ್ದ ಅವರ ಧಮ್ಮ ಮಾರ್ಗ, ಬಸವಣ್ಣನವರ ವಚನಗಳು, ಗಾಂಧೀಜಿ ಅವರ ಅಹಿಂಸೆ ಹಾಗೂ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಗಳನ್ನು ಅರ್ಥ ಮಾಡಿಕೊಂಡರೆ ನಮಗೆ ನಮ್ಮ ಸಂವಿಧಾನ ಸುಲಭವಾಗಿ ಅರ್ಥವಾಗುತ್ತದೆ ಎಂದರು.

ADVERTISEMENT

ರಾಜಕಾರಣಿಗಳಿಗೆ ನಿವೃತ್ತಿ ವಯೋಮಿತಿ ಇಲ್ಲದಿರುವುದು ಮುಖ್ಯ ಅಲ್ಲ. ಅವರಿಗೆ ನೈತಿಕ ಮಾನದಂಡಗಳು ಇಲ್ಲದೇ ಇರುವುದೇ ಪ್ರಮುಖ ಸಮಸ್ಯೆ ಎನಿಸಿದೆ. ಈಚೆಗೆ ರಾಜ್ಯದಲ್ಲಿ ನಡೆದ ಪಕ್ಷಾಂತರಗಳಲ್ಲಿ ಭಾಗವಹಿಸಿದವರೆಲ್ಲರೂ 40ರ ವಯೋಮಾನದ ಒಳಗಿನ ರಾಜಕಾರಣಿಗಳೇ ಆಗಿದ್ದಾರೆ ಎಂದು ಹೇಳಿದರು.

ಸಂಸದರಾಗಿ ಆಯ್ಕೆಯಾದವರ ಪೈಕಿ ಶೇ 61ರಷ್ಟು ಮಂದಿ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಇದ್ದಾರೆ. ಶೇ 30ರಷ್ಟು ಮಂದಿ ಎಸ್ಸೆಸ್ಸೆಲ್ಸಿಯಿಂದ ಹಿಡಿದು ಪದವಿವರೆಗಿನ ವಿದ್ಯಾಭ್ಯಾಸ ಪಡೆದವರಿದ್ದಾರೆ. ಹೀಗಿದ್ದರೂ, ಈಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಒಂದೇ ಒಂದು ಚರ್ಚೆ ಆಗದೇ ಅನೇಕ ಮಸೂದೆಗಳು ಅಂಗೀಕಾರ ಪಡೆದವು ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ಶಾಲೆಯ ಡೀನ್ ಹಾಗೂ ನಿರ್ದೇಶಕ ಪ್ರೊ.ಡಾ.ಸಿ.ಬಸವರಾಜು, ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್‍ಕುಮಾರ್, ಡಿಸಿಪಿ ಮುತ್ತುರಾಜ್ ಕಾರ್ಯಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.