ADVERTISEMENT

ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಗೃಹಿಣಿ

ಮೊಬೈಲ್‌ ಮನಸ್ತಾಪ: ಸಾವಿನಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 4:03 IST
Last Updated 18 ಅಕ್ಟೋಬರ್ 2020, 4:03 IST

ಮೈಸೂರು: ಇಲ್ಲಿನ ಗಾಯತ್ರಿಪುರಂನಲ್ಲಿ ಪತಿಯೊಟ್ಟಿಗಿನ ಮನಸ್ತಾಪದಿಂದ ಬೇಸರಗೊಂಡ ಗೃಹಿಣಿಯೊಬ್ಬರು, ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು, ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಮುಜಾಮಿಲ್ ಪಾಷ ಎಂಬುವರ ಪತ್ನಿ ಸೋಫಿಯಾ ಬಾನು (23) ಮೃತಪಟ್ಟ ಮಹಿಳೆ.

ಮುನಾಸಾ ಫಾತಿಮಾ (3) ಹಾಗೂ ಒಂದೂವರೆ ವರ್ಷದ ಇನಾಯಾ ಫಾತಿಮಾ ಸಹೋದರಿಯರು ತಾಯಿಯಿಂದಲೇ ಹತ್ಯೆಗೀಡಾದ ಮಕ್ಕಳು. ಇವರಿಬ್ಬರ ಸಾವು ಹೇಗೆ ಸಂಭವಿಸಿದೆ ಎಂಬುದು ಇನ್ನೂ ಖಚಿತಪಟ್ಟಿಲ್ಲ ಎಂದು ಉದಯಗಿರಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೊಬೈಲ್‌ ಮನಸ್ತಾಪ: ಸೋಫಿಯಾ ಹೆಚ್ಚಿನ ಹೊತ್ತು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದರು. ಇದರಿಂದ ಬೇಸತ್ತಿದ್ದ ಮುಜಾಮಿಲ್ ಪಾಷಾ 15 ದಿನದ ಹಿಂದೆ ಪತ್ನಿಯ ಬಳಿಯಿದ್ದ ಮೊಬೈಲ್‌ ಕಿತ್ತುಕೊಂಡಿದ್ದರು.

ಇದೇ ವಿಷಯಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಸೋಫಿಯಾ ಸಾಯುವುದಾಗಿಯೂ ಪತಿಗೆ ಎಚ್ಚರಿಕೆ ನೀಡಿದ್ದಳು. ನಂತರ ಮುಜಾಮಿಲ್ ಪತ್ನಿಗೆ ಮೊಬೈಲ್ ಕೊಟ್ಟಿದ್ದ. ಇಬ್ಬರ ನಡುವೆ ಮಾತುಕತೆ ಅಷ್ಟಕ್ಕಷ್ಟೇ ಆಗಿತ್ತು.

ಶನಿವಾರ ನಸುಕಿನ 4 ಗಂಟೆಯವರೆಗೂ ಕೆಲಸ ಮಾಡಿದ್ದ ಮುಜಾಮಿಲ್ ಮನೆಗೆ ಹೋಗಿ ಪತ್ನಿಯ ಜೊತೆಯೇ ಮಲಗಿದ್ದ. ಬೆಳಿಗ್ಗೆ ಎಚ್ಚರಗೊಂಡು ಕೊಠಡಿಯ ಬಾಗಿಲು ತೆರೆಯಲು ಮುಂದಾದಾಗ ಹೊರಗಿನಿಂದ ಚಿಲಕ ಹಾಕಿದ್ದು ಗೊತ್ತಾಗಿದೆ.

ತಕ್ಷಣವೇ ತನ್ನ ಅಣ್ಣನಿಗೆ ಮೊಬೈಲ್ ಕರೆ ಮಾಡಿದ್ದಾನೆ. ಆತ ಕಿಟಕಿಯ ಬಾಗಿಲು ಮುರಿದು ಮನೆ ಪ್ರವೇಶಿಸಿ, ಮುಜಾಮಿಲ್‌ನನ್ನು ಕೊಠಡಿಯಿಂದ ಹೊರಗೆ ಕರೆ ತಂದಿದ್ದಾನೆ. ಪಕ್ಕದ ಕೊಠಡಿ ಪರಿಶೀಲಿಸಿದಾಗ ಸೋಫಿಯಾ ನೇಣು ಹಾಕಿಕೊಂಡು ಮೃತಪಟ್ಟಿರುವುದು ತಿಳಿದು ಬಂದಿದೆ ಎಂದು ಉದಯಗಿರಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.