ADVERTISEMENT

ದೇವರಾಜ ಮಾರುಕಟ್ಟೆಯಲ್ಲಿ ತಪಾಸಣೆ

ಶ್ರೀಲಂಕಾ ಬಾಂಬ್‌ ಸ್ಫೋಟದಿಂದ ಎಚ್ಚೆತ್ತ ಐಎಸ್‌ಡಿ

​ಪ್ರಜಾವಾಣಿ ವಾರ್ತೆ
Published 22 ಮೇ 2019, 20:20 IST
Last Updated 22 ಮೇ 2019, 20:20 IST
ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಪರಿಶೀಲನೆ ನಡೆಸಿದರು
ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಪರಿಶೀಲನೆ ನಡೆಸಿದರು   

ಮೈಸೂರು: ದೇವರಾಜ ಮಾರುಕಟ್ಟೆಯಲ್ಲಿ ಆಂತರಿಕ ಭದ್ರತಾ ಪಡೆಯು (ಐಎಸ್‌ಡಿ) ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿತು.

ಬಾಂಬ್ ನಿಷ್ಕ್ರಿಯ ದಳ, ಗುಪ್ತಚರ ಇಲಾಖೆ ಹಾಗೂ ಪಾಲಿಕೆಯ ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಈ ತಂಡದಲ್ಲಿದ್ದರು. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲ ಅಂಗಡಿಯವರು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.

ಮಾರುಕಟ್ಟೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ನಿತ್ಯ ಸೇರುವುದರಿಂದ ಅವಘಡ ಸಂಭವಿಸಿದಾಗ ಯಾವ ರೀತಿಯ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕು ಎನ್ನುವುದರ ಕುರಿತು ತಂಡದ ಅಧಿಕಾರಿಗಳು ಪರಿಶೀಲಿಸಿದರು.

ADVERTISEMENT

ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ನಿಯಂತ್ರಣ ಕಚೇರಿ 100ಗೆ ಮಾಹಿತಿ ನೀಡಲು ಅಂಗಡಿ ಮಾಲೀಕರಿಗೆ ಅವರು ಮನವಿ ಮಾಡಿದರು.

‘ಒಂದಷ್ಟು ಸರಕುಗಳನ್ನು ಖರೀದಿಸುವ ವ್ಯಕ್ತಿಗಳು ಒಂದು ಚೀಲವನ್ನಿಟ್ಟು ನಂತರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಬಹುದು. ಅಂತಹ ವ್ಯಕ್ತಿಗಳು ಮತ್ತು ಚೀಲದ ಬಗ್ಗೆ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸದ್ಯ, ದೇವರಾಜ ಮಾರುಕಟ್ಟೆ ಹಾಗೂ ಸಯ್ಯಾಜಿರಾವ್ ರಸ್ತೆಯ ಕೆಲವು ಅಂಗಡಿಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ಮಹಾನಗರ ಪಾಲಿಕೆ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್.ಮಹದೇವ್, ‘ಸಿಸಿಟಿವಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿರುವುದು ನಿಜ. ಶೀಘ್ರದಲ್ಲೇ ಎಲ್ಲರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಆಂತರಿಕ ಭದ್ರತಾ ವಿಭಾಗದ ಇನ್‌ಸ್ಪೆಕ್ಟರ್ ಆರ್.ವಿಜಯಕುಮಾರ್, ಎಎಸ್‌ಐ ಆರ್.ಲಕ್ಷ್ಮಣ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ಆರ್.ಬಾಬು, ಜಿ.ಸೋಮಶೇಖರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಪರಿಶೀಲನಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.