ADVERTISEMENT

ಮುಡಾ ಪ್ರರರಣ: ದೂರು ನೀಡಲು ವಿಧಾನಪರಿಷತ್ ಸದಸ್ಯ ವಿಶ್ವನಾಥ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 14:35 IST
Last Updated 1 ಡಿಸೆಂಬರ್ 2024, 14:35 IST
ಎ.ಎಚ್. ವಿಶ್ವನಾಥ್‌
ಎ.ಎಚ್. ವಿಶ್ವನಾಥ್‌   

ಮೈಸೂರು: ‘ಮುಡಾದಲ್ಲಿ ನಡೆದಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಿವೇಶನ ಖರೀದಿಸಿದವರ ಕಥೆ ಏನಾಗಬೇಕು? ಹೆಚ್ಚು– ಕಡಿಮೆಯಾದರೆ ಅವರೆಲ್ಲರೂ ಪ್ರಾಣ ಕಳೆದುಕೊಳ್ಳುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್‌ ಹೇಳಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿವೇಶನಗಳ ಹಂಚಿಕೆ ಅಕ್ರಮದ ಬಗ್ಗೆ ಮುಡಾನೇ ದೂರು ಕೊಟ್ಟಿಲ್ಲ ಎಂಬುದನ್ನು ಆಧರಿಸಿ ಪ್ರಕರಣ ಅಂತ್ಯಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ’ ಎಂದು ಆರೋಪಿಸಿದರು.

‘ಮುಡಾದಿಂದ 140 ದಾಖಲೆಗಳನ್ನು (ಫೈಲ್‌ಗಳನ್ನು) ಐಎಎಸ್ ಅಧಿಕಾರಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಅವುಗಳನ್ನು ಸುಟ್ಟು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಅವು ಯಾರಿಗೆ ಸಂಬಂಧಿಸಿದವು ಎಂಬುದನ್ನು ಸರ್ಕಾರ ತಿಳಿಸಬೇಕು’ ಎಂದು ಒತ್ತಾಯಿಸಿದರು. ‘ನಗರಾಭಿವೃದ್ಧಿ ಸಚಿವರನ್ನು ಮೊದಲ ಜೈಲಿಗೆ ಕಳುಹಿಸಬೇಕು’ ಎಂದರು.

ADVERTISEMENT

‘ವಕ್ಫ್ ಆಸ್ತಿಯನ್ನು ನುಂಗಿರುವವರು ಬಲಿಷ್ಠ ಮುಸ್ಲಿಮರೇ ಹೊರತು ಕನಿಷ್ಠ ಮುಸ್ಲಿಮರಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ರಕ್ಷಣೆಗೆ ಹೋಗುತ್ತಿಲ್ಲವಲ್ಲ ಏಕೆ?’ ಎಂದು ಕೇಳಿದರು.

‘ಕೇಂದ್ರವು ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದು, ಬಿಜೆಪಿಯವರು ಆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇವಲ ಹಿಂದುತ್ವದ ಬಗ್ಗೆ ಮಾತನಾಡುವುದೇ ಕೆಲಸವಲ್ಲ’ ಎಂದರು.

‘ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ. ಅವರು ಪತ್ರ ಬರೆದು, ಬಾಯಿತಪ್ಪಿನಿಂದ ಆಗಿದೆ ಎಂದು ಕ್ಷಮೆ ಕೋರಿದ ಮೇಲೂ ಅವರ ವಿರುದ್ಧ ಕ್ರಮ ವಹಿಸಿರುವುದನ್ನು ಸಹಿಸಲಾಗದು. ಈ ಇಳಿವಯಸ್ಸಿನಲ್ಲಿ ಅವರಿಗೆ ತೊಂದರೆ ಕೊಡಬಾರದಿತ್ತು. ಅವರ ವಿರುದ್ಧದ ಪ್ರಕರಣವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಗುರುಪರಂಪರೆಯನ್ನು ಗೌರವಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಮುಡಾದ ಆಸ್ತಿಗೆ ಅಧ್ಯಕ್ಷರು ಹಾಗೂ ಆಯುಕ್ತರೇ ಮಾಲೀಕರು. ಆದರೆ, ಸಾವಿರಾರು ನಿವೇಶನಗಳನ್ನು ಕಳವು ಮಾಡಿದ್ದರೂ ಅವರು ಈವರೆಗೂ ಲಿಖಿತ ದೂರು ಕೊಟ್ಟಿಲ್ಲವೇಕೆ? ಇಷ್ಟಾದರು ಕಾನೂನು ಸಲಹೆ ಪಡೆಯುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿರುವುದು ಸರಿಯಲ್ಲ. ಹಿಂದಿನ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ತಕ್ಷಣ ದೂರು ದಾಖಲಿಸಬೇಕು’ ‌ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಡಿ.5ರಂದು ಆಯೋಜಿಸಿರುವ ಸಮಾವೇಶ ಯಾರಿಗೋಸ್ಕರ?’ ಎಂದು ಕೇಳಿದ ಅವರು, ‘ಸಿದ್ದರಾಮಯ್ಯ ಅವರಿಗೆ ಸಂಕಟ ಬಂದಾಗಲೆಲ್ಲಾ ಅಹಿಂದ ವೆಂಕಟರಮಣ’ ಎಂದು ವ್ಯಂಗ್ಯವಾಡಿದರು. ‘ಅಹಿಂದ ವರ್ಗಕ್ಕೆ ಏನು ಮಾಡಿದ್ದೇನೆ ಎಂಬುದನ್ನು ಅವರು ತಿಳಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.