ADVERTISEMENT

ಕ್ಷುಲ್ಲಕ ಕಾರಣಕ್ಕೆ ಜಗಳ; ಕೊಲೆಯಲ್ಲಿ ಅಂತ್ಯ

ಮದ್ಯಪಾನ ಮಾಡುವಾಗ ಗಲಾಟೆ, ಕೆಎಸ್‌ಆರ್‌ಟಿಸಿ ಕಂಡಕ್ಟರ್ ಕಾಂತರಾಜ್‌ ಸಾವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:26 IST
Last Updated 12 ಫೆಬ್ರುವರಿ 2020, 9:26 IST
ರಾಜು
ರಾಜು   

ಪಿರಿಯಾಪಟ್ಟಣ: ತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ಮದ್ಯಪಾನ ಮಾಡುವಾಗ ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಸೇರಿ ಸ್ನೇಹಿತರಿಬ್ಬರ ಮೇಲೆ ಸೋಮವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಕಂಡಕ್ಟರ್, ಕಂಪಲಾಪುರ ಗ್ರಾಮದ ಕಾಂತರಾಜ್ (44) ಮೃತಪಟ್ಟಿದ್ದಾರೆ. ಅವರ ತಮ್ಮ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದಿನಗೂಲಿ ನೌಕರ ನಾರಾಯಣ (41) ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಪಲಾಪುರ ಗ್ರಾಮದ ರಾಜು ಮತ್ತು ಆತನ ಸಹೋದರ ಸಂತೋಷ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳು.

ADVERTISEMENT

ಘಟನೆಯ ವಿವರ: ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಕಂಪಲಾಪುರದಲ್ಲಿ ಕಾಂತರಾಜ್, ನಾರಾಯಣ ಹಾಗೂ ಆರೋಪಿಗಳಾದ ರಾಜು ಮತ್ತು ಸಂತೋಷ್ ಜೊತೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ, ಮದ್ಯಕ್ಕೆ ಬೆರೆಸಲು ನೀರು ತರುವ ವಿಷಯಕ್ಕೆ ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ತಿರುಗಿದೆ. ಹೊರಗೆ ಬಂದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ನಂತರ ಸಮಾಧಾನ ಗೊಂಡು ಸಂತೋಷ, ಕಾಂತ ರಾಜ್ ಹಾಗೂ ನಾರಾಯಣ ಮತ್ತೆ ಮದ್ಯ ಸೇವಿಸಲು ಮುಂದಾಗಿದ್ದಾರೆ. ಆದರೆ, ರಾಜು ಮನೆಗೆ ತೆರಳಿ ಕಬ್ಬಿಣದ ರಾಡ್ ತಂದು ಕಾಂತರಾಜ್ ಮತ್ತು ನಾರಾಯಣ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಸಂತೋಷ್‌ ಸಹ ಹಲ್ಲೆ ನಡೆಸಿದ್ದಾರೆ ಎಂದು ಕಾಂತರಾಜ್ ತಂಗಿಯ ಗಂಡ ಧರ್ಮಪಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಂತರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ನಾರಾಯಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಫೆ.5ರಂದು ಕಂಪಲಾಪುರದ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಧರ್ಮಪಾಲ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಮತ್ತು ರಾಜು ಹಲ್ಲೆ ನಡೆಸಿದ್ದನ್ನು ಮೃತ ಕಾಂತರಾಜ್ ಪ್ರಶ್ನಿಸಿದ್ದೂ ಸಹ ಗಲಾಟೆಗೆ ಕಾರಣ ಎನ್ನಲಾಗಿದೆ.

ತಾಲ್ಲೂಕಿನ ರಾವಂದೂರು ಗ್ರಾಮದ ಆಟೊ ನಿಲ್ದಾಣದ ಬಳಿ ಆರೋಪಿ ರಾಜುವನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮತ್ತು ಡಿವೈಎಸ್‌ಪಿ ಕೆ.ಎಸ್.ಸುಂದರ್ ರಾಜ್, ಸಿಪಿಐ ಬಿ.ಆರ್.ಪ್ರದೀಪ್ ಭೇಟಿ ನೀಡಿ ಪರಿಶೀಲಿಸಿದರು.

ಆರೋಪಿಗಳ ಎನ್‌ಕೌಂಟರ್‌ಗೆ ಆಗ್ರಹ
ಪಟ್ಟಣದ ಶವಾಗಾರದಲ್ಲಿದ್ದ ಕಾಂತರಾಜ್‌ ಶವವನ್ನು ಪರೀಕ್ಷಿಸಲು ಮೃತರ ಸಂಬಂಧಿಕರು ಅಡ್ಡಿಪಡಿಸಿದರು. ಆರೋಪಿಯನ್ನು ಎನ್‌ಕೌಂಟರ್ ಮಾಡುವಂತೆ ಪಟ್ಟು ಹಿಡಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ರಾಮು ಮತ್ತು ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಸಮಾಧಾನ ಪಡಿಸಿದರು. ಮೈಸೂರಿನಲ್ಲಿ ಶವ ಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟರು.

ಕಂಪಲಾಪುರದ ಪರಿಶಿಷ್ಟ ಜನಾಂಗದ ಕಾಲೊನಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.