ಮೈಸೂರು: ‘ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನದ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಮಾರ್ಚ್ 24ರಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನೆ ಮುಂದೆ ಮುತ್ತಿಗೆ ಹಾಕಲು ದಲಿತ ಸಂಘರ್ಷ ಸಮಿತಿ ನಿರ್ಧಾರವನ್ನು ಕೈಬಿಡಬೇಕು’ ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮನವಿ ಮಾಡಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ‘ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅವರು ತಮ್ಮ ನಿರ್ಧಾರ ಬದಲಿಸಬೇಕು. ನಿಮ್ಮ ಹೋರಾಟದ ಬಗ್ಗೆ ಅಪಾರ ಗೌರವವಿದ್ದು, ಸಮುದಾಯಗಳಲ್ಲಿ ಗೊಂದಲ ಉಂಟು ಮಾಡುವ ಅವಕಾಶ ನೀಡಬಾರದು’ ಎಂದು ಕೋರಿದರು.
‘ಅಂಬೇಡ್ಕರ್ ಭವನ ರಾಜ್ಯದಲ್ಲಿಯೇ ಮಾದರಿಯಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಸಚಿವ ಮಹದೇವಪ್ಪ ಅವರಿಗೂ ಇದೆ. 1994ರಲ್ಲಿಯೇ ಆರೋಗ್ಯ ಸಚಿವರಾಗಿದ್ದಾಗ ಅವರು, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿದ್ಧರಾಮಯ್ಯ ಗಮನಕ್ಕೆ ತಂದು ಸರ್ಕಾರವನ್ನು ಒತ್ತಾಯಿಸಿದ್ದರು’ ಎಂದು ತಿಳಿಸಿದರು.
‘ಅದರ ಫಲವಾಗಿ ಹಂತ ಹಂತವಾಗಿ ಮುಂದುವರಿದು 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ₹19 ಕೋಟಿ ಹಣ ನೀಡಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭವಾಗಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿದೆ. 2018ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮತ್ತು 2019ರಲ್ಲಿ ಬಂದ ಬಿಜೆಪಿ ಸರ್ಕಾರ ಈ ಕಾಮಗಾರಿ ಆರಂಭಿಸಲು ಮುತುವರ್ಜಿ ವಹಿಸಲಿಲ್ಲ’ ಎಂದು ದೂರಿದರು.
‘ಇದೀಗ ಸಚಿವ ಮಹದೇವಪ್ಪ ಅವರ ಕಾಳಜಿಯಿಂದ ಸುಸಜ್ಜಿತ ಆಸನ, ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಗಮನಕ್ಕೆ ತಂದು ಹೆಚ್ಚುವರಿ ₹23 ಕೋಟಿ ಹಣಬಿಡುಗಡೆ ಮಾಡಿಸಿದ್ದಾರೆ. ಮಾರ್ಚ್ 27ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಲಿದೆ. ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಿ ಒಂದು ವರ್ಷದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ದೊರೆಯಲಿದೆ’ ಎಂದು ತಿಳಿಸಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂತರಾಜ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಈಶ್ವರ್ ಚಕ್ಕಡಿ, ಕಾಂಗ್ರೆಸ್ ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಪುಟ್ಟರಸ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.