ADVERTISEMENT

ನಂಜನಗೂಡು: ಕಳಲೆ ಶ್ರೀ ಲಕ್ಷ್ಮಿಕಾಂತಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:47 IST
Last Updated 18 ಮಾರ್ಚ್ 2025, 13:47 IST
ನಂಜನಗೂಡು ತಾಲ್ಲೂಕಿನ ಕಳಲೆಯಲ್ಲಿ ಲಕ್ಷ್ಮಿಕಾಂತಸ್ವಾಮಿ ಜಾತ್ರಾ ಮಹೋತ್ಸವದ ಂಗವಾಗಿ ಮಂಗಳವಾರ ರಥೋತ್ಸವ ಜರುಗಿತು
ನಂಜನಗೂಡು ತಾಲ್ಲೂಕಿನ ಕಳಲೆಯಲ್ಲಿ ಲಕ್ಷ್ಮಿಕಾಂತಸ್ವಾಮಿ ಜಾತ್ರಾ ಮಹೋತ್ಸವದ ಂಗವಾಗಿ ಮಂಗಳವಾರ ರಥೋತ್ಸವ ಜರುಗಿತು   

ನಂಜನಗೂಡು: ತಾಲ್ಲೂಕಿನ ಕಳಲೆಯಲ್ಲಿ ಲಕ್ಷ್ಮಿಕಾಂತಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ದೇವಾಲಯದಲ್ಲಿ ಮುಂಜಾನೆ ಲಕ್ಷ್ಮಿಕಾಂತ ಸ್ವಾಮಿಗೆ ಕ್ಷೀರಾಭಿಷೇಕ, ಫಲ-ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ  ಪೂಜೆಗಳನ್ನು ನೆರವೇರಿಸಲಾಯಿತು. ನಂತರ ಬೆಳಿಗ್ಗೆ 6 ರಿಂದ 6.15 ಗಂಟೆಯೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ವಜ್ರ-ವೈಢೂರ‍್ಯಗಳಿಂದ ಅಲಂಕೃತವಾದ ರೀಲಕ್ಷ್ಮಿಕಾಂತ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥೋತ್ಸದಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿ, ಪೂಜಿ ಸಲ್ಲಿಸಿದ ಬಳಿಕ ಬೆಳಿಗ್ಗೆ 8.15 ಗಂಟೆಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತ್ತು ದೇವಾಲಯದ ಪಾರು ಪತ್ತೆದಾರ್ ಜಯರಾಮ್ ಅವರು ರಥದ ಚಕ್ರಕ್ಕೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥವನ್ನು ಶ್ರದ್ಧಾ ಭಕ್ತಿಯಿಂದ ಎಳೆದರು, ರಥ ಗ್ರಾಮದ ಬೀದಿಗಳಲ್ಲಿ ಚಲಿಸುವಾಗ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಕೋರಿ, ಹಣ್ಣು ದವನ ಅರ್ಪಿಸಿ ಪ್ರಾರ್ಥಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥ ಮರಳಿ ಸ್ವಸ್ಥಾನ ಸೇರಿತು.

ADVERTISEMENT

ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥವನ್ನು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಿಂದ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು. ರಥ ಚಲಿಸುವ ಮಾರ್ಗದಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ರಥ ದುರಸ್ತಿ ಮಾಡಿಸಲು ಮನವಿ

ದೇವಾಲಯದ ಪಾರುಪತ್ತೆದಾರ್ ಜಯರಾಮು ಮಾತನಾಡಿ ‘ಲಕ್ಷ್ಮಿಕಾಂತ ಸ್ವಾಮಿಯ ದೇವಾಲಯ ಐತಿಹಾಸಿಕ ಹಿನ್ನೆಲೆ ಹೊಂದಿದೆ. ರಥ ಶಿಥಿಲಾವಸ್ಥೆಯಲ್ಲಿದೆ. ದೇವಾಲಯವು ಶ್ರೀಕಂಠೇಶ್ವರ ದೇವಾಲಯದ ಅಧೀನದಲ್ಲಿ ಬರುವುದರಿಂದ ಪುರಾತನ ದೇವಾಲಯದ ಆಚರಣೆಗಳನ್ನು ಉಳಿಸುವ ಸಲುವಾಗಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಿ ಶ್ರೀಕಂಠೇಶ್ವರ ದೇವಾಲಯದ ಅನುದಾನವನ್ನು ಬಳಸಿಕೊಂಡು ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಬೇಕು ಮುಂದಿನ ಜಾತ್ರೆಯ ವೇಳೆಗೆ ಶಿಥಿಲಾವಸ್ಥೆಯಲ್ಲಿರುವ ರಥದ ರಿಪೇರಿ ಕಾರ್ಯ ಕೈಗೊಂಡು ಭಕ್ತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.