ಮೈಸೂರು: 'ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಗಡುವಿಲ್ಲ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಈ ವಿಷಯದಲ್ಲಿ ಯಾರಿಗೂ ಆತಂಕ ಬೇಡ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಶನಿವಾರ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
'ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ತಯಾರಿ ಮಾಡಿದ್ದೇವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಆ್ಯಪ್ ತೋರಿಸುತ್ತೇವೆ.
ನಂತರ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡುತ್ತೇವೆ. ಆ.17ರ ನಂತರ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ. ನಿರಂತರವಾಗಿ ಮುಂದುವರಿಯಲಿದೆ' ಎಂದು ಸಚಿವರು ಸ್ಪಷ್ಟಪಡಿಸಿದರು.
'ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ಮಾಡಿದ್ದೇವೆ. ಅರ್ಜಿ ಸಲ್ಲಿಕೆಗೆ ಒಂದು ರೂಪಾಯಿಯನ್ನೂ ಯಾರಿಗೂ ಕೊಡಬೇಡಿ. ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಸಿಕ್ಕರೆ ನೀವು ಫಲಾನುಭವಿಗಳ ಪಟ್ಟಿಗೆ ಸೇರುತ್ತೀರಿ. ಇದರಲ್ಲಿ ಯಾವುದೇ ಗೊಂದಲ ಬೇಡ' ಎಂದರು.
'ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಹಣಕಾಸಿನ ಕೊರತೆ ಇದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲ ರೀತಿಯ ಸಂಪನ್ಮೂಲ ನಮ್ಮ ಬಳಿ ಇದೆ. ವದಂತಿಗಳಿಗೆ ಕಿವಿಗೊಡಬೇಡಿ' ಎಂದು ತಿಳಿಸಿದರು.
'ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಚಾಮುಂಡೇಶ್ವರಿ ಬಳಿ ಹರಕೆ ಹೊತ್ತಿದ್ದೆ. ದೇವಿ ಮುಂದೆ ಸೆರಗೊಡ್ಡಿ ಬೇಡಿಕೊಂಡಿದ್ದೆ. ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದೇನೆ' ಎಂದು ಹೇಳಿದರು.
'ರಾಜ್ಯದಲ್ಲಿ ಒಳ್ಳೆಯ ಮಳೆ- ಬೆಳೆಯಾಗಲಿ ಎಂದು ದೇವಿಯನ್ನು ಬೇಡಿದ್ದೇನೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.