ADVERTISEMENT

ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ಪ್ರತ್ಯೇಕವಾಗಿ 2 ಕಡೆ ಧರಣಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 9:33 IST
Last Updated 17 ಜುಲೈ 2020, 9:33 IST
ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಮೈಸೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಮೈಸೂರಿನ ರೈಲು ನಿಲ್ದಾಣದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು
ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಮೈಸೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರು ಮೈಸೂರಿನ ರೈಲು ನಿಲ್ದಾಣದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು   

ಮೈಸೂರು: ರೈಲ್ವೆ ಖಾಸಗೀಕರಣ ಬೇಡವೇ ಬೇಡ ಎಂಬ ಘೋಷಣೆಗಳು ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಶುಕ್ರವಾರ ಮೊಳಗಿದವು.

‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿಐಟಿಯು) ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ರೈಲ್ವೆ ಜನಸಾಮಾನ್ಯರ ಜೀವನಾಡಿ. ಇಂತಹ ಬೃಹತ್ ಸಂಪರ್ಕ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಹಿತವನ್ನು ಬಲಿ ಕೊಟ್ಟಿದೆ ಎಂದು ಕಿಡಿಕಾರಿದರು.

ADVERTISEMENT

109 ರೈಲು ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸುವ, 151 ಖಾಸಗಿ ರೈಲುಗಳನ್ನು ಓಡಿಸುವ ತಮ್ಮ ನಿರ್ಧಾರದಿಂದ ಕೂಡಲೇ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಖಾಸಗಿಯವರು ಸಹಜವಾಗಿಯೇ ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಾರೆ. ಇದರಿಂದ ಟಿಕೆಟ್ ದರಗಳು ದುಬಾರಿಯಾಗಲಿವೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಇದರಿಂದ ಹೆಚ್ಚಿನ ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದರ ಜತೆಗೆ, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಲಾಭದ ಆಸೆಗಾಗಿ ಖಾಸಗಿಯವರು ಸಹಜವಾಗಿಯೇ ಉದ್ಯೋಗ ಕಡಿತ, ವೇತನ ಕಡಿತ, ಹಿಂಬಡ್ತಿ ಸೇರಿದಂತೆ ನಾನಾ ರೀತಿಯ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಿದರೆ ನೌಕರರು ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗುವರು ಎಂದು ಅವರು ಹೇಳಿದರು.

ಸರ್ಕಾರ ಕೂಡಲೇ ಖಾಸಗೀಕರಣ ಮಾಡುವ ತನ್ನ ಪ್ರಯತ್ನದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲಿನ ದಾಳಿ ಖಂಡಿಸಿ ನಗರದಲ್ಲಿ ಪ್ರತ್ಯೇಕವಾಗಿ 2 ಪ್ರತಿಭಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದವು.

ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷರಾದ ಆರ್.ಸುನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ನಗರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ಇತರರು ಇದ್ದರು.

ಆರೋಪಿಗಳನ್ನು ಗಡಿಪಾರು ಮಾಡಲು ಒತ್ತಾಯ

ಅಂಬೇಡ್ಕರ್ ನಿವಾಸದ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಿ, ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಪುನರ್‌ ಅವಲೋಕನ)ದ ರಾಜ್ಯ ಸಮಿತಿಯ ಸದಸ್ಯರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಹರಿಹರ ಆನಂದಸ್ವಾಮಿ, ಜಿಲ್ಲಾ ಘಟಕದ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್, ಆರ್ಟಿಸ್ಟ್ ಎಸ್.ನಾಗರಾಜು, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಎನ್.ಬಾಬು ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.