ADVERTISEMENT

ಭೂಮಿ ಕೊಟ್ಟವರಿಗೆ ಉದ್ಯೋಗಕ್ಕೆ ಆಗ್ರಹಿಸಿ ಹೋರಾಟ

ಏಷ್ಯನ್‌ ಪೇಂಟ್ಸ್‌ ಕಾರ್ಖಾನೆ ಮುಂದೆ 23 ರಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:57 IST
Last Updated 20 ನವೆಂಬರ್ 2020, 1:57 IST

ಮೈಸೂರು: ಏಷ್ಯನ್‌ ಪೇಂಟ್ಸ್‌ ಕಾರ್ಖಾನೆಗೆ ಭೂಮಿ ನೀಡಿದವರಿಗೆ ಉದ್ಯೋಗ ಕೊಡದಿರುವುದನ್ನು ಖಂಡಿಸಿ ನ.23 ರಿಂದ ಕಾರ್ಖಾನೆಯ ಮುಂದೆ ‍ಪ್ರತಿಭಟನೆಗೆ ನಿರ್ಧರಿಸಲಾಗಿದೆ.

ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಸಮೀಪ ರೈತರು ಕಾರ್ಖಾನೆ ಸ್ಥಾಪನೆಗೆ ಸುಮಾರು 175 ಎಕರೆ ಭೂಮಿ ನೀಡಿದ್ದರು. ಆ ಸಮಯದಲ್ಲಿ ಭೂಮಿ ನೀಡಿದ 63 ಕುಟುಂಬಗಳ ತಲಾ ಒಬ್ಬರು ಸದಸ್ಯರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಆದರೆ, ನಾಲ್ಕೂವರೆ ವರ್ಷ ಕಳೆದರೂ ಉದ್ಯೋಗ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಖಾನೆಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಭೂಮಿ ನೀಡಿದ ರೈತರ ಕುಟುಂಬದ ಸದಸ್ಯರು, ಗ್ರಾಮದ ಮುಖಂಡರು, ರೈತರ ಸಂಘದ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಸಂಬಂಧ ಕಾರ್ಖಾನೆ ಎಲ್ಲರಿಗೂ ತರಬೇತಿ ನೀಡಿತ್ತು. ಇದೀಗ ಬೇರೆ ಕಡೆ ಉದ್ಯೋಗ ಕೊಡುವುದಾಗಿ ಹೇಳುತ್ತಿದೆ. ಒಪ್ಪಂದದ ಪ್ರಕಾರ ಅದೇ ಕಾರ್ಖಾನೆಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘವು ಕೆಐಎಡಿಬಿ ಮತ್ತು ಜಿಲ್ಲಾಧಿಕಾರಿ ಜತೆ ಈ ಸಂಬಂಧ ಹಲವು ಸಲ ಸಭೆ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರ ಮತ್ತು ಜಿಲ್ಲಾಡಳಿತವು ಪ್ರಭಾವಿ ವ್ಯಕ್ತಿಗಳಿಗೆ ತಲೆಬಾಗಿದೆ ಎಂದು ದೂರಿದರು.

ಶ್ವೇತಪತ್ರ ಹೊರಡಿಸಲಿ: ಕೈಗಾರಿಕೆಗಳನ್ನು ಸ್ಥಾಪಿಸಲು ಕಳೆದ 20 ವರ್ಷಗಳ ಅವಧಿಯಲ್ಲಿ ಎಷ್ಟು ಎಕರೆ ಜಮೀನು ಸ್ವಾಧೀನಪಡಿಸಲಾಗಿದೆ? ಆ ಜಾಗದಲ್ಲಿ ಎಷ್ಟು ಕಡೆ ಕೈಗಾರಿಕೆಗಳು ಆರಂಭವಾಗಿವೆ? ನಿಗದಿತ ಉದ್ದೇಶಕ್ಕೆ ಬಳಸದ ಜಮೀನು ಎಷ್ಟಿದೆ? ಭೂಮಿ ಕಳೆದುಕೊಂಡ ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ? ಎಂಬ ಮಾಹಿತಿಯನ್ನು ನೀಡಲು ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನಗೌಡ, ಪ್ರಕಾಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.