ADVERTISEMENT

ಹುಣಸೂರಿನಲ್ಲಿ ಬಿರುಗಾಳಿ, ಮಳೆಗೆ ಮಹಿಳೆ ಬಲಿ

ಮೈಸೂರು– ಮಡಿಕೇರಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ, ಹಾರಿದ ಮನೆಯ ಚಾವಣಿಗಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:18 IST
Last Updated 24 ಏಪ್ರಿಲ್ 2019, 11:18 IST
ಹುಣಸೂರು ತಾಲ್ಲೂಕಿನಲ್ಲಿ ಬೀಸಿದ ಬಿರುಗಾಳಿಗೆ ರಸ್ತೆ ಅಂಚಿನ ಮರ ಉರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಹುಣಸೂರು ತಾಲ್ಲೂಕಿನಲ್ಲಿ ಬೀಸಿದ ಬಿರುಗಾಳಿಗೆ ರಸ್ತೆ ಅಂಚಿನ ಮರ ಉರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.   

ಹುಣಸೂರು: ಪಟ್ಟಣದಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಮತ್ತು ಮಳೆಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮೈಸೂರು– ಮಡಿಕೇರಿ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದಿದ್ದರಿಂದ ಸುಮಾರು 15 ಕಿ.ಮೀನಷ್ಟು ದೂರದವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಹುಣಸೂರು– ಪಿರಿಯಾಪಟ್ಟಣ ಮಾರ್ಗ ಸಂಪೂರ್ಣ ಬಂದ್ ಆಗಿ ವಾಹನ ಸವಾರರು ಕೆಲಕಾಲ ಪರದಾಡಿದರು. ಹುಣಸೇಗಾಲ ಗ್ರಾಮದಲ್ಲಿ 70ಕ್ಕೂ ಹೆಚ್ಚಿನ ಮನೆಗಳ ಚಾವಣಿ ಹಾರಿ ಹೋಗಿವೆ.

ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ನಿವಾಸಿ ದೊಡ್ಡತಾಯಮ್ಮ (73) ಎಂಬುವವರು ಮನೆಯಲ್ಲಿ ಮಲಗಿದ್ದಾಗ ಇವರ ಮೇಲೆ ಬಿರುಗಾಳಿಗೆ ತುಂಡಾದ ಚಾವಣಿಯ ಶೀಟು ಬಿದ್ದಿದೆ. ಇದರಿಂದ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುತ್ರಿ ಭಾರತಿ ಅರಸು ಅವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಗ್ರಾಮದಲ್ಲಿ ಬುಧವಾರ ಹಬ್ಬ ಇರುವುದರಿಂದ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮಾಡಲಾಗುವುದು ಎಂದು ತಹಶೀಲ್ದಾರ್ ಬಸವರಾಜು ತಿಳಿಸಿದ್ದಾರೆ.

ಮೈಸೂರು– ಮಡಿಕೇರಿ ರಸ್ತೆಯಲ್ಲಿ ಅಡ್ಡವಾಗಿ ಬಿದ್ದ ಮರವನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಯಿತು. ಇದರಿಂದ 15 ಕಿ.ಮಿ ವರೆಗೂ ಸಾಲುಗಟ್ಟಿ ನಿಂತಿದ್ದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಹುಣಸೂರು– ಪಿರಿಯಾಪಟ್ಟಣ ಮಾರ್ಗ ಸಂಪೂರ್ಣ ಬಂದ್ ಆಗಿ ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿದ್ದವು.

ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಮರ ಉರುಳಿ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಪೊಲೀಸ್‌ ಮತ್ತು ಅಗ್ನಿಶಾಮಕ ದಳದವರು ತೆರಳಿ ಮರಗಳನ್ನು ತೆರವುಗೊಳಿಸಿದರು.

ತಾಲ್ಲೂಕಿನ ಬಿಲ್ಲೇನಹೊಸಹಳ್ಳಿ, ತಟ್ಟೆಕೆರೆ, ಹುಣಸೇಗಾಲ, ಸೇರಿದಂತೆ ಹನಗೋಡು ಭಾಗದ ಮುತ್ತುರಾಯನಹೊಸಹಳ್ಳಿ ಗ್ರಾಮದ ಕೆಲವು ಕಡೆ ಭಾರಿ ಮಳೆ ಹಾಗೂ ಗಾಳಿಗೆ ಬಾಳೆ ತೋಟ ನೆಲಕ್ಕುರುಳಿವೆ.

ಹುಣಸೇಗಾಲ ಗ್ರಾಮದಲ್ಲಿ 70ಕ್ಕೂ ಹೆಚ್ಚಿನ ಮನೆಗಳ ಚಾವಣಿ ಹಾರಿ ಹೋಗಿದ್ದು, ತೆಂಗಿನ ಮರವೊಂದು ಗ್ರಾಮದ ಮನೆಯೊಂದರ ಮೇಲೆ ಉರುಳಿದೆ. ಗ್ರಾಮದ ಆಸುಪಾಸಿನಲ್ಲಿ ಹಾದು ಹೋಗಿದ್ದ ವಿದ್ಯುತ್‌ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ್ ಮತ್ತು ತಂಡ ಭೇಟಿ ನೀಡಿ ಪರಹಾರ ಕಾರ್ಯದಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.