ADVERTISEMENT

ಅಂಗವಿಕಲರಿಗಾಗಿ ರ‍್ಯಾಂಪ್; ಒಪ್ಪದ ಜಿ.ಪಂ ಸದಸ್ಯರು

ಲೋಕಸಭಾ ಚುನಾವಣೆಗೂ ಮುನ್ನ ಶಾಲೆಗಳಲ್ಲಿ ರ‍್ಯಾಂಪ್ ನಿರ್ಮಿಸಲು ಚುನಾವಣಾ ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 18:13 IST
Last Updated 15 ಫೆಬ್ರುವರಿ 2019, 18:13 IST
ಮೈಸೂರಿನ ಜಿಲ್ಲಾ ಪಂಚಾಯಿತಿಯ ಪ್ರಭಾರ ಅಧ್ಯಕ್ಷ ಎಸ್.ಆರ್.ನಂದೀಶ್  ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯನ್ನು ಶುಕ್ರವಾರ ನಡೆಸಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿಯ ಪ್ರಭಾರ ಅಧ್ಯಕ್ಷ ಎಸ್.ಆರ್.ನಂದೀಶ್  ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯನ್ನು ಶುಕ್ರವಾರ ನಡೆಸಿದರು.   

ಮೈಸೂರು: ಶಾಲೆಗಳಲ್ಲಿ ಅಂಗವಿಕಲರಿಗಾಗಿ ರ‍್ಯಾಂಪ್ ನಿರ್ಮಿಸಲು ಜಿಲ್ಲಾ ಪಂಚಾಯಿತಿಯಡಿ ಬರುವ ಅಂಗವಿಕಲರ ಅನುದಾನದ ಬಳಕೆಗೆ ಜಿಲ್ಲಾ ಪಂಚಾಯಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯ ಪ್ರಭಾರಿ ಅಧ್ಯಕ್ಷ ಎಸ್.ಆರ್.ನಂದೀಶ್ ಇಲ್ಲಿ ಶುಕ್ರವಾರ ನಡೆಸಿದ ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.

ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅಂಗವಿಕಲರಿಗಾಗಿ ಅನುಕೂಲವಾಗಲಿ ಎಂದು ಎಲ್ಲ ಶಾಲೆಗಳಲ್ಲಿ ರ‍್ಯಾಂಪ್ ನಿರ್ಮಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಎಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ದರ್ಶನ್ ವಿಷಯ ಪ್ರಸ್ತಾಪಿಸಿದರು. ಆದರೆ, ಜಿ.ಪಂ ಸದಸ್ಯರು, ‘ರ‍್ಯಾಂಪ್ ನಿರ್ಮಿಸಲು ಬೇರೆ ಅನುದಾನ ಬಳಸಿ. ನಮಗೆ ಬರುವ ಅನುದಾನದಲ್ಲಿ ಅಂಗವಿಕಲರಿಗೆ ಅಗತ್ಯ ಇರುವ ಸಲಕರಣೆಗಳನ್ನು ನೀಡಿ’ ಎಂದು ಸೂಚಿಸಿದರು.

ADVERTISEMENT

ಬೇಗೂರು ಗ್ರಾಮ ಪಂಚಾಯಿತಿಯ ಸದಸ್ಯರ ಮುಸುಕಿನ ಗುದ್ದಾಟದಿಂದ ವಸತಿ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿರುವ ವಿಷಯವೂ ಸಭೆಯಲ್ಲಿ ಕೇಳಿ ಬಂತು. ಈ ವೇಳೆ ಮಾತನಾಡಿದ ಸದಸ್ಯ ವೆಂಕಟಸ್ವಾಮಿ, ‘76 ಕುಟುಂಬಕ್ಕೆ ಮನೆಗಳನ್ನು ದೊರಕಿಸಿಕೊಡಲು ಗ್ರಾಮಗಳಿಗೆ ಭೇಟಿ ನೀಡಿ ನೀವೇ ಆಯ್ಕೆ ಮಾಡಿ’ ಎಂದು ಪಿ.ಡಿ.ಒ ಹನುಮಂತರಾಜ್ ಹಾಗೂ ಎಚ್‍.ಡಿ.ಕೋಟೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಅವರಿಗೆ ಹೇಳಿದರು.

ವಿವಿಧ ಯೋಜನೆಗಳ ಪ್ರಗತಿಯ ಅಂಕಿಅಂಶಗಳನ್ನು ನೀಡಲು ತಡಕಾಡಿದ ಆಲನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಸಿದ್ದಪ್ಪ ಅವರನ್ನು ಇದೇ ವೇಳೆ ನಂದೀಶ್ ತರಾಟೆಗೆ ತೆಗೆದುಕೊಂಡರು.

ಜಿ.ಪಂ ಸದಸ್ಯರಾದ ನಯೀಮಾ ಸುಲ್ತಾನ, ಬಿ.ಸಿ.ಪರಿಮಳ ಶ್ಯಾಮ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಿ.ಡಿ.ಒಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.