ADVERTISEMENT

ಪರ್ಯಾಯ ಸಂಶೋಧನಾ ವಿಧಾನಕ್ಕೆ ಸಲಹೆ

ಹೊಸ ಬಗೆಯ ವಿಧಾನಗಳನ್ನು ಶೋಧಿಸಲು ಕರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:58 IST
Last Updated 6 ಫೆಬ್ರುವರಿ 2020, 15:58 IST
ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ವಿ.ವಿಯ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಕುಲಸಚಿವ ಆರ್.ಶಿವಪ್ಪ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್‌ ಅಸಾದಿ, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದಾರೆ
ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ವಿ.ವಿಯ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಕುಲಸಚಿವ ಆರ್.ಶಿವಪ್ಪ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್‌ ಅಸಾದಿ, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದಾರೆ   

ಮೈಸೂರು: ವಸಾಹತುಶಾಹಿ ಸಂಶೋಧನಾ ವಿಧಾನಗಳ ಬದಲಿಗೆ ಪರ್ಯಾಯ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್‌ ಅಸಾದಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ಇಲ್ಲಿನ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಮಾಜವಿಜ್ಞಾನಗಳ ವಿಭಾಗಗಳನ್ನು ಮುಚ್ಚಬೇಕು ಎಂದು ಜಪಾನ್ ಸರ್ಕಾರ ಪ್ರಸ್ತಾಪ ಮಾಡಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಹ ಇದೇ ಬಗೆಯಲ್ಲಿ ಪ್ರತಿಪಾದಿಸಿಯೂ ಇದ್ದರು. ಸಮಾಜವಿಜ್ಞಾನವೇ ಆಗಲಿ, ಸಂಶೋಧನೆಗಳೇ ಆಗಲಿ ಹೊಸ ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದಲ್ಲಿ ಈ ರೀತಿಯ ಅಭಿಪ್ರಾಯಗಳು ಮೂಡುತ್ತವೆ ಎಂದರು.‌

ADVERTISEMENT

ಹಳೆಯ ಸಿದ್ಧಾಂತಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಹೋದರೆ ಪ್ರಯೋಜನ ಇಲ್ಲ. ಹಳೆಯದನ್ನು ವಿಮರ್ಶಿಸುವ, ಇದಕ್ಕೆ ಪರ್ಯಾಯವನ್ನು ಹುಟ್ಟು ಹಾಕುವ ಪ್ರಕ್ರಿಯೆಗಳು ನಡೆಯಬೇಕು. ಆಗ ಸಂಶೋಧನೆಗಳೇ ಆಗಲಿ, ಸಾಮಾಜಿಕವಿಜ್ಞಾನಗಳೇ ಆಗಲಿ ಜೀವಂತಿಕೆ ಪಡೆಯುತ್ತವೆ ಎಂದು ತಿಳಿಸಿದರು.

ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ

ತದೇಕಚಿತ್ತದಿಂದ ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ತಿಳಿಸಿದರು.

ಧಾರವಾಡದ ಹಳ್ಳಿಗಳಲ್ಲಿ ಸುಮಾರು 40 ದಿನಗಳ ಕಾಲ ಇದ್ದು, ಅಲ್ಲಿಯ ಜನರ ಮಾತುಗಳನ್ನು, ಕಥೆಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಕಲಿತಷ್ಟು ಪಿಎಚ್‌ಡಿ ಅಥವಾ ಕಾಲೇಜಿನಲ್ಲಿ ಕಲಿಯಲಿಲ್ಲ ಎಂದು ಹೇಳಿದರು.

ಸಹನೆ ಮತ್ತು ತಾಳ್ಮೆ ಎಲ್ಲರಿಗೂ ಇರಬೇಕು. ಸಂಶೋಧಕರಿಗಂತೂ ಇದು ಹೆಚ್ಚಾಗಿರಬೇಕು. ಆಗ ಮಾತ್ರ ಉತ್ತಮ ಸಂಶೋಧನೆ ಮಾಡಲು ಸಾಧ್ಯ ಎಂದು ವಿವರಿಸಿದರು.

ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.