ADVERTISEMENT

ಸರ್ವರ್‌ ಡೌನ್: ಆರ್‌ಟಿಒ ಸೇವೆ ವಿಳಂಬ, ಸೌಲಭ್ಯ ಪಡೆಯಲಾರದೇ ತೊಂದರೆಗೆ ಸಿಲುಕಿದ ಜನ

ನೇಸರ ಕಾಡನಕುಪ್ಪೆ
Published 22 ಮೇ 2019, 19:47 IST
Last Updated 22 ಮೇ 2019, 19:47 IST
ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿರುವ ನಾಗರಿಕರು
ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿರುವ ನಾಗರಿಕರು   

ಮೈಸೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಯಲ್ಲಿ ಸರ್ವರ್‌ ಡೌನ್‌ ಆಗುತ್ತಿರುವ ಕಾರಣ, ಮೂರು ದಿನಗಳಿಂದ ಸೇವೆಗಳನ್ನು ಪಡೆಯಲಾರದೇ ನಾಗರಿಕರು ತೊಂದರೆಗೆ ಸಿಲುಕಿದ್ದಾರೆ.

ಆರ್‌ಟಿಒನಲ್ಲಿ ಈಗ ಎಲ್ಲ ಸೇವೆಗಳೂ ಆನ್‌ಲೈನ್‌ ಆಗಿವೆ. ವಾಹನ ಚಾಲನೆ ಕಲಿಯುವವರ ಪರವಾನಗಿ, ವಾಹನ ಚಾಲನೆ ಪರವಾನಗಿ, ವಾಹನ ಮಾಲೀಕತ್ವ ನೋಂದಣಿ, ಮಾಲೀಕತ್ವ ಬದಲಾವಣೆ, ಸರಕು ಸಾಗಣೆ ವಾಹನ ನೋಂದಣಿ, ಪರವಾನಗಿ ನವೀಕರಣ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಈಗ ಆನ್‌ಲೈನ್ ಮೂಲಕವೇ ಮಾಡಿಕೊಳ್ಳಬೇಕಿದೆ. ಮೊದಲು ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಿಗುವ ಸಂಪರ್ಕ ಕೊಂಡಿಯನ್ನು ಬಳಸಿಕೊಂಡು ಅಗತ್ಯ ಮಾಹಿತಿ, ದಾಖಲಾತಿಗಳನ್ನು ಅಡಕಗೊಳಿಸಿ ಬಳಿಕ ಆರ್‌ಟಿಒ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು.

ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ತುಂಬಿ ಶುಲ್ಕ ಪಾವತಿಸುವ ಹಂತದಿಂದಲೇ ಕಚೇರಿಯಲ್ಲಿ ತೊಂದರೆ ಎದುರಾಗಿದೆ. ಶುಲ್ಕ ಪಾವತಿಸಿ ರಸೀತಿ ಪಡೆಯಲು ಇಲಾಖೆಯ ಸರ್ವರ್‌ ಕಾರ್ಯನಿರ್ವಹಿಸುತ್ತಿರಬೇಕು. ಮೂರು ದಿನಗಳಿಂದ ಸರ್ವರ್‌ ಡೌನ್‌ ಆಗಿರುವುದು ಸಮಸ್ಯೆ ತಂದಿಟ್ಟಿದೆ. ಸರ್ವರ್‌ ಸಂಪರ್ಕ ಇಲ್ಲದೇ ಇರುವ, ಹಣ ಸ್ವೀಕರಿಸಿ ರಸೀತಿ ನೀಡಲು ಆಗುವುದೇ ಇಲ್ಲ. ಈ ಕಾರಣದಿಂದಾಗಿ ಸೇವೆ ನಿರೀಕ್ಷಿಸಿ ಬರುವ ನಾಗರಿಕರು ವಾಪಸಾಗುವುದು ಅನಿವಾರ್ಯವಾಗಿದೆ.

ADVERTISEMENT

ಪ್ರಕ್ರಿಯೆಗಳೂ ವಿಳಂಬ: ದಾಖಲಾತಿಗಳ ಪರಿಶೀಲನೆ ಸರ್ವರ್‌ ಡೌನ್ ಕಾರಣದಿಂದಾಗಿ ವಿಳಂಬವಾಗುತ್ತಿದೆ. ಹಾಗಾಗಿ, ಚಾಲಕರ ಪರವಾನಗಿ, ವಾಹನ ನೋಂದಣಿ ಮುಂತಾದ ಪ್ರಕ್ರಿಯೆಗಳು ನಿಧಾನವಾಗಿವೆ. ಈಗ ‘ಸಿಮ್‌’ ಸಹಿತ ಪ್ಲಾಸ್ಟಿಕ್‌ ಕಾರ್ಡ್ ನೀಡುತ್ತಿರುವ ಕಾರಣ, ಈ ಹಂತ ನಿಧಾನವಾಗುತ್ತಿದೆ. ಇದೇ ಕಾರಣದಿಂದಾಗಿ ಸಾಮಾನ್ಯವಾಗಿ ಪ್ಲಾಸ್ಟಿಕ್‌ ಕಾರ್ಡ್ ನೀಡಲು ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದ ಆರ್‌ಟಿಒ ಈಗ ಎರಡರಿಂದ ಮೂರು ತಿಂಗಳು ತೆಗೆದುಕೊಳ್ಳುತ್ತಿದೆ.

ಕಲಿಯುವವರ ಲೈಸೆನ್ಸ್‌: ಕಲಿಯುವವರ ಪರವಾನಗಿ ನೀಡುವುದಕ್ಕೂ ಮುನ್ನ ಈಗ ಆನ್‌ಲೈನ್‌ ಆಧಾರಿತ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ‘ಆರ್‌ಟಿಒ’ ಕಚೇರಿಯಲ್ಲಿ ಪರೀಕ್ಷೆಗೆ ಕುಳಿತರೆ ಕಂಪ್ಯೂಟರ್‌ ಕಾರ್ಯ ನಿರ್ವಹಿಸುವುದೇ ಇಲ್ಲ. ಹಾಗಾಗಿ, ಪರೀಕ್ಷಾ ಕಾರ್ಯ ಮುಂದುವರೆಯುವುದೇ ಇಲ್ಲ. ಹಾಗಾಗಿ, ಆರ್‌ಟಿಒ ಸಿಬ್ಬಂದಿ ಪರೀಕ್ಷೆಗೆ ಬಂದವರನ್ನು ಇದೇ ಕಾರಣ ನೀಡಿ ಮುಂದಿನ ದಿನ ಬರುವಂತೆ ವಾಪಸು ಕಳುಹಿಸುತ್ತಿದ್ದಾರೆ.

‘ನಮಗೆ ಪರೀಕ್ಷೆಗೆ ಹಾಜರಾಗಲು ದಿನಾಂಕ ನಿಗದಿ ಮಾಡಿರುತ್ತಾರೆ. ಸಮಯವನ್ನೂ ನಿಗದಿ ಮಾಡಿರುತ್ತಾರೆ. ಆದರೆ, ಪರೀಕ್ಷೆ ನಡೆಸದೇ ಇನ್ನೊಂದು ದಿನ ಬರಲು ಹೇಳಿದರೆ ತೊಂದರೆಯಾಗುತ್ತದೆ. ಕೆಲಸ ಬಿಟ್ಟು ಇದಕ್ಕಾಗಿ ಅಲೆಯಬೇಕಾಗುತ್ತದೆ’ ಎಂದು ಕನ್ನೇಗೌಡನ ಕೊಪ್ಪಲಿನ ನಿವಾಸಿ ಅನಿತಾ ಬಸವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೇ ಭಾವಚಿತ್ರ, ಸಹಿ, ದಾಖಲಾತಿಗಳನ್ನು ನೀಡಿರುತ್ತೇವೆ. ಅದನ್ನು ಮತ್ತೊಮ್ಮೆ ಪರಿಶೀಲನೆ ಮಾಡುವ ಅಗತ್ಯವೇನಿದೆ. ಒಂದೊಮ್ಮೆ ನಾವು ನೀಡಿರುವ ದಾಖಲಾತಿ ನಕಲಿಯಾಗಿದ್ದರೆ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲುವಂತೆ ಮಾಡುವ ಅಗತ್ಯವೇನಿದೆ’ ಎಂದು ಪಡುವಾರಹಳ್ಳಿಯ ಅನುರಾಗ್‌ ಕೃಷ್ಣ ಪ್ರಶ್ನಿಸಿದರು.

ಸಾಮಾನ್ಯವಾಗಿ ದಿನವೊಂದಕ್ಕೆ ಗರಿಷ್ಠ 80 ಮಂದಿ ಕಲಿಯುವವರ ಲೈಸೆನ್ಸ್‌ ಪಡೆಯಲು ಬರುತ್ತಾರೆ. ಸರ್ವರ್‌ ಡೌನ್‌ ಸಮಸ್ಯೆಯಿಂದಾಗಿ ಈಗ ಈ ಸಂಖ್ಯೆ ಹೆಚ್ಚಾಗಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಸಮಸ್ಯೆಯೇನಿಲ್ಲ; ತಾತ್ಕಾಲಿಕ ತೊಂದರೆ

ಸರ್ವರ್‌ ಡೌನ್ ಸಮಸ್ಯೆ ಶಾಶ್ವತವಲ್ಲ. ಇದು ತಾತ್ಕಾಲಿಕ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಕೆಲವೊಮ್ಮೆ ಅಂತರ್ಜಾಲ ಸಂಪರ್ಕ ನಿಧಾನವಾಗುವ ಕಾರಣ ಸರ್ವರ್‌ ಕಾರ್ಯಾಚರಣೆಯೂ ನಿಧಾನವಾಗಿರುತ್ತದೆ. ಹಾಗೆಂದು ಇದು ಮುಂದೆಯೂ ಹೀಗೆಯೇ ಮುಂದುವರೆಯುತ್ತದೆ ಎನ್ನಲಾಗದು. ನಾಗರಿಕರ ಸೇವೆ ತ್ವರಿತವಾಗಿ ನಡೆಯಬೇಕು ಎನ್ನುವುದೇ ನಮ್ಮ ಆಶಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.