ADVERTISEMENT

ಚಿಣ್ಣರ ಮನತಣಿಸುವ ಸುಂದರ ತಾಣ

ಚೆಲ್ಲಹಳ್ಳಿ ಅಂಗನವಾಡಿ ಕೇಂದ್ರ ಮಾದರಿ

ಎಚ್.ಎಸ್.ಸಚ್ಚಿತ್
Published 16 ಸೆಪ್ಟೆಂಬರ್ 2018, 18:58 IST
Last Updated 16 ಸೆಪ್ಟೆಂಬರ್ 2018, 18:58 IST
ಹುಣಸೂರು ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕೇಂದ್ರ
ಹುಣಸೂರು ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕೇಂದ್ರ   

ಹುಣಸೂರು: ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದಲ್ಲಿ ಮುಚ್ಚುವ ಹಂತದಲ್ಲಿದ್ದ ಅಂಗನವಾಡಿ ಕೇಂದ್ರ ಈಗ ಮಾದರಿ ಕೇಂದ್ರವಾಗಿದೆ. ಇದಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಹಾಗೂ ಖಾಸಗಿ ಸಂಸ್ಥೆಯ ಸಹಭಾಗಿತ್ವ.

ಖಾಸಗಿ ಕೇಂದ್ರಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಾಣವಾಗಿರುವ ಈ ಅಂಗನವಾಡಿಯಲ್ಲಿ ಈಗ 20ಕ್ಕೂ ಹೆಚ್ಚು ಮಕ್ಕಳು ಬಂದು ಆಟ– ಪಾಠಗಳಲ್ಲಿ ಸಂತಸದಿಂದ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರದ ಮುಖ್ಯದ್ವಾರದಲ್ಲಿ ನಿಲ್ಲಿಸಿರುವ ಜಿರಾಫೆಯ ಎರಡು ಪ್ರತಿಕೃತಿಗಳು ಮಕ್ಕಳನ್ನು ಸ್ವಾಗತಿಸಿದರೆ, ಕಾಂಪೌಂಡ್‌ ಮೇಲೆ ಇರುವ ವಿವಿಧ ಪ್ರಾಣಿ, ಪಕ್ಷಿಗಳ ಆಕೃತಿಗಳು ಪುಟಾಣಿಗಳ ಕಣ್ಮನ ಸೆಳೆಯುತ್ತಿವೆ.

ಒಳ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಪುಟ್ಟ ಉಯ್ಯಾಲೆ, ಬಲ ಭಾಗದಲ್ಲಿ ಮಕ್ಕಳ ಪಾದರಕ್ಷೆ ಇಡುವ ವ್ಯವಸ್ಥೆ ಕಲ್ಪಿಸಲಾಗಿದೆ. ತರಗತಿಯ ಗೋಡೆಗಳ ಮೇಲೆ ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾದ ಅನೇಕ ಮಾಹಿತಿಗಳು ಹಾಗೂ ಮನರಂಜನೆ ನೀಡಲು ಮಿಕ್ಕಿಮೌಸ್‌ಗಳು ವಿಶ್ವ ಆರ್ಟ್ಸ್‌ ಸಂಸ್ಥೆಯ ಕಲಾವಿದರ ಕುಂಚದಲ್ಲಿ ಅರಳಿವೆ.

ADVERTISEMENT

ಚಿಣ್ಣರಿಗಾಗಿ 1 ಅಡಿ ಎತ್ತರದ ಆಸನಗಳ ಸೌಲಭ್ಯ ಕಲ್ಪಿಸಲಾಗಿದ್ದು, ಅದನ್ನೇ ಮಂಚವನ್ನಾಗಿಯೂ ಪರಿವರ್ತಿಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಸಿದ್ಧಪಡಿಸಿರುವ ‘ಸಿಟ್ಟಿಂಗ್ ಕಂ ಕಾಟ್‌’ಗಳು ಈ ಅಂಗನವಾಡಿ ಕೇಂದ್ರದ ವಿಶೇಷತೆಗಳಲ್ಲಿ ಒಂದಾಗಿವೆ. ಅಲ್ಲದೆ, ಕುಡಿಯಲು ಬಿಸಿ ಹಾಗೂ ತಣ್ಣೀರು, ಪ್ರತ್ಯೇಕ ಶೌಚಾಲಯ, ಅಡುಗೆಮನೆ, ಉಗ್ರಾಣದ ವ್ಯವಸ್ಥೆಯೂ ಇದೆ. ವಿವಿಧ ಹೂ, ತರಕಾರಿಗಳನ್ನೂ ಬೆಳೆಯಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಕೇವಲ 4ರಿಂದ 6 ಮಕ್ಕಳು ಇದ್ದರು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ‘ರೋಟರಿ ಸೌತ್‌ ಈಸ್ಟ್ ಸಂಸ್ಥೆ’ ಈ ಕೇಂದ್ರವನ್ನು ಅಭಿವೃದ್ಧಿ ಮಾಡಿದೆ. ರೋಟರಿಯೊಂದಿಗೆ ಫಾರ್ಚೂನ್‌ ಸೂರ್ಯಕ್ರಾಂತಿ, ವಿದಿಲ್‌ ಫುಡ್‌ ಪ್ರಾಡಕ್ಟ್ಸ್, ಹಿಂದೂಸ್ತಾನ್ ಎಂಟರ್‌ಪ್ರೈಸ್‌, ಯಶಸ್ವಿ ಮಾರ್ಕೆಟಿಂಗ್, ಇನೋವೇಟಿವ್‌ ಸಲ್ಯೂಷನ್ಸ್, ಕಲಿಸು ಫೌಂಡೇಷನ್‌, ರಾಮದೇವ ಎಲೆಕ್ಟ್ರಿಕಲ್ಸ್‌ ಮತ್ತು ವಿಶ್ವ ಆರ್ಟ್ಸ್‌ ಸಂಸ್ಥೆಗಳು ಕೈಜೋಡಿಸಿವೆ’ ಎಂದು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.