ADVERTISEMENT

MUDA Scam | ಸಿದ್ದರಾಮಯ್ಯಗೆ ತವರಲ್ಲೇ ತನಿಖೆ ಎದುರಿಸಬೇಕಾದ ಸ್ಥಿತಿ

ಮೈಸೂರು ಲೋಕಾಯುಕ್ತ ಕಚೇರಿಯತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 1:25 IST
Last Updated 26 ಸೆಪ್ಟೆಂಬರ್ 2024, 1:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮುಡಾದಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು’ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಇದರೊಂದಿಗೆ, ಸಿದ್ದರಾಮಯ್ಯ ತಮ್ಮ ತವರಿನಲ್ಲೇ ತನಿಖೆ ಎದುರಿಸಬೇಕಾದ ಸನ್ನಿವೇಶ ಮೊದಲ ಬಾರಿಗೆ ಎದುರಾಗಿದೆ.

ಮೈಸೂರಿನವರೇ ಆದ ಸ್ನೇಹಮಯಿ ಕೃಷ್ಣ ಅವರ ದೂರಿನ ಆಧಾರದಲ್ಲಿ ಮುಖ್ಯಮಂತ್ರಿಗೆ ಈ ಪರಿಸ್ಥಿತಿ ಎದುರಾಗಿದೆ.

ಮೈಸೂರು ಲೋಕಾಯುಕ್ತ ಪೊಲೀಸರ ಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ. ಮುಖ್ಯಮಂತ್ರಿ ವಿರುದ್ಧ ಯಾವಾಗ ಹಾಗೂ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ? ಸಿದ್ದರಾಮಯ್ಯ ಸೇರಿದಂತೆ ಐವರು ಆರೋಪಿಗಳನ್ನು ಯಾವಾಗ ವಿಚಾರಣೆಗೆ ಒಳಪಡಿಸುತ್ತದೆ ಎಂಬ ಕುತೂಹಲವೂ ಮೂಡಿದೆ. ಬಿಜೆಪಿ ಹಾಗೂ ಜೆಡಿಎಸ್‌ನವರು ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ADVERTISEMENT

ಮೂಲಗಳ ಪ್ರಕಾರ, ‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಬುಧವಾರ ರಾತ್ರಿವರೆಗೂ ತಲುಪಿರಲಿಲ್ಲ. ಅಧಿಕೃತ ಆದೇಶದ ಪ್ರತಿ ಹಾಗೂ ನಿರ್ದೇಶನ ದೊರೆತ ನಂತರ ಕ್ರಮ ವಹಿಸಲಿದ್ದಾರೆ’.

ವಿಶೇಷ ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆದಿದ್ದೇನೆ ಅದನ್ನು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಸಲ್ಲಿಸಿ ಎಫ್‌ಐಆರ್‌ ದಾಖಲಿಸಲು ಕೋರುತ್ತೇನೆ.
ಸ್ನೇಹಮಯಿ ಕೃಷ್ಣ, ದೂರುದಾರ

ದೂರುದಾರರಲ್ಲಿ ಒಬ್ಬರಾದ ಪ್ರದೀಪ್‌ಕುಮಾರ್‌, ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್‌ ಅನುಮತಿ ಕೊಟ್ಟಿರುವುದರಿಂದ ಎಫ್‌ಐಆರ್‌ ದಾಖಲಿಸುವಂತೆ ಬುಧವಾರ ಬೆಳಿಗ್ಗೆಯೇ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ನಡುವೆ, ಬುಧವಾರ ಮಧ್ಯಾಹ್ನ ಹೊರಬಿದ್ದ ‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ದ ಆದೇಶದಂತೆ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ.

ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು, ‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ದ ತೀರ್ಪಿನ ಪ್ರತಿಯನ್ನು ಗುರುವಾರ ಇಲ್ಲಿನ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿ ಎಫ್‌ಐಆರ್‌ ದಾಖಲಿಸುವಂತೆ ಕೋರುವ ಸಾಧ್ಯತೆ ಇದೆ.

‘ಮುಖ್ಯಮಂತ್ರಿ ವಿರುದ್ದ ಪ್ರಕರಣ ದಾಖಲಿಸಲು ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲೇ ಲೋಕಾಯುಕ್ತ ಪೊಲೀಸರು ಸಂಜೆವರೆಗೂ ಕಾದಿದ್ದರು. ಆದರೆ, ಆದೇಶದ ಪ್ರತಿ ಬಾರದ ಕಾರಣ ಕ್ರಮ ಕೈಗೊಂಡಿಲ್ಲ. ತಲುಪಿದ ಕೂಡಲೇ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಎಸ್ಪಿ ಅಧಿಕಾರಿಗಳ ಸಭೆಯನ್ನೂ ನಡೆಸಿದರು’ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.