ADVERTISEMENT

ಚಾಮುಂಡಿ ಬೆಟ್ಟದಲ್ಲಿ ವಾಸವಿರುವವರ ಸ್ಥಳಾಂತರವಿಲ್ಲ: ಎಸ್.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 13:21 IST
Last Updated 6 ಜುಲೈ 2022, 13:21 IST
ಸಚಿವ ಎಸ್.ಟಿ. ಸೋಮಶೇಖರ್‌
ಸಚಿವ ಎಸ್.ಟಿ. ಸೋಮಶೇಖರ್‌   

ಮೈಸೂರು: ‘ಚಾಮುಂಡಿ ಬೆಟ್ಟದಲ್ಲಿ ಪ್ರಸ್ತುತ ವಾಸವಾಗಿರುವವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾವವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

‘ಬೆಟ್ಟದಲ್ಲಿ ಇನ್ನು ಮುಂದೆ ಹೊಸದಾಗಿ ಮನೆ ಕಟ್ಟುವವರಿಗೆ ಬೆಟ್ಟದ ಕೆಳ ಭಾಗದಲ್ಲಿ ನಿವೇಶನ ನೀಡಲು ಜಾಗ ಗುರುತಿಸುವಂತೆ ಮೂಡಾ ಅಧ್ಯಕ್ಷರನ್ನು ಕೇಳಿಕೊಳ್ಳಲಾಯಿತು. ಕುಟುಂಬಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನವನ್ನು ಬೆಟ್ಟದ ಕೆಳಭಾಗದಲ್ಲಿ ಗುರುತಿಸುವಂತೆ ಸೂಚಿಸಲಾಗಿದೆಯೇ ಹೊರತು ಇದ್ದವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸಬೇಕು ಎನ್ನುವ ಅಭಿಪ್ರಾಯವನ್ನು ಯಾರೂ ಕೊಟ್ಟಿಲ್ಲ’ ಎಂದು ಹೇಳಿದ್ದಾರೆ.

‘ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರ ರಚಿಸಬೇಕು ಎಂಬ ಅಭಿಪ್ರಾಯ ಬುಧವಾರ ನಡೆದ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಬೆಟ್ಟದಲ್ಲಿ ಹೊಸ ಮನೆಗಳ‌ ನಿರ್ಮಾಣಕ್ಕೆ ನಿಯಂತ್ರಣ ಹೇರಲಾಗುತ್ತದೆಯೇ ಹೊರತು, ಅಲ್ಲಿನ ಜನರನ್ನ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಪ್ರಸ್ತುತ ಇರುವ ಯಾವ ಮನೆಗಳನ್ನೂ ತೆರವುಗೊಳಿಸಲು ನಿರ್ಧರಿಸಿಲ್ಲ. ಅಂಥ ನಿರ್ಧಾರಗಳನ್ನು ಮುಂದೆಯೂ ನಾವು ಕೈಗೊಳ್ಳುವುದಿಲ್ಲ. ಹೊಸ ಮನೆಗಳ ನಿರ್ಮಾಣಕ್ಕೆ ಚಾಮುಂಡಿ ಬೆಟ್ಟ ಪಾದದ ಬಳಿ ನಾಲ್ಕೈದು ಎಕರೆ ಜಾಗ ನಿಗದಿಪಡಿಸುತ್ತೇವೆ. ಅದಕ್ಕೆ ಚಾಮುಂಡೇಶ್ವರಿ ಬಡವಾಣೆ ಎಂದು ಹೆಸರಿಡುತ್ತೇವೆ. ಮುಂದೆ ಚಾಮುಂಡಿ ಬೆಟ್ಟದಲ್ಲಿ ಯಾರಿಗಾದರೂ ಮನೆಗಳ ಅವಶ್ಯಕತೆ ಬಿದ್ದರೆ ನಿರ್ಮಿಸಲು ಆ ಬಡಾವಣೆಯಲ್ಲಿ ನಿವೇಶನ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.