ADVERTISEMENT

ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ

ಚಿಕ್ಕಮಕ್ಕಳು ಪ್ರತಿಮೆ ಏರಲು ಹೋಗಿದ್ದರಿಂದ ಅವಘಡ– ಪಾಲಿಕೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 14:03 IST
Last Updated 6 ನವೆಂಬರ್ 2020, 14:03 IST
ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದರು
ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದರು   

ಮೈಸೂರು: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿರುವ ದಂಡಿ ಸ್ಮಾರಕದ ಮಹಾತ್ಮ ಗಾಂಧಿ ಪ್ರತಿಮೆಯ ಕೈಯಲ್ಲಿದ್ದ ಕೋಲು ಮುರಿದು ಬಿದ್ದಿದೆ. ಅವರ ಕೈ ಬೆರಳುಗಳಿಗೆ ಸ್ವಲ್ಪ ಹಾನಿಯಾಗಿದೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ವಲಯ ಕಚೇರಿ 6ರ ಸಹಾಯಕ ಆಯುಕ್ತ ನಾಗರಾಜು ಪರಿಶೀಲನೆ ನಡೆಸಿದರು. ನಂತರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಇಲ್ಲಿ ಆಟವಾಡುವ ಚಿಕ್ಕಮಕ್ಕಳು ಕೋಲನ್ನು ಹಿಡಿದು ಪ್ರತಿಮೆ ಏರಲು ಯತ್ನಿಸಿದ್ದಾರೆ. ಈ ವೇಳೆ ಪಿಒಪಿಯಿಂದ ಮಾಡಲಾಗಿದ್ದ ಕೋಲು ಮುರಿದಿದೆ. ಕೈಯನ್ನು ಹಿಡಿದು ಹತ್ತಲು ಯತ್ನಿಸಿದ್ದರಿಂದ ಕೈಬೆರಳುಗಳಿಗೆ ಕೊಂಚ ಹಾನಿಯಾಗಿದೆ. ಮದ್ಯವ್ಯಸನಿಗಳ ಕುರುಹು ಇಲ್ಲಿ ಕಂಡು ಬಂದಿಲ್ಲ’ ಎಂದು ತಿಳಿಸಿದರು.‌

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸುಬ್ಬರಾಯರ ಕೆರೆಯ (ವಾರ್ಡ್ ನಂ 23) ಪಾಲಿಕೆ ಸದಸ್ಯೆ ಪ್ರಮಿಳಾ ಭರತ್, ‘ಪ್ರತಿಮೆಯನ್ನು ಪರಿಶೀಲನೆ ನಡೆಸಿದಾಗ ಹಾನಿಯಾಗಿರುವುದು ಕಂಡು ಬಂದಿದೆ. ಆದರೆ, ಸ್ಥಳದಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿಲ್ಲ. ಹಿಂದೆಯೂ ಇಲ್ಲಿರುವ ಭಗತ್ ಸಿಂಗ್ ನೇಣುಗಂಬ ಶಿಥಿಲಾವಸ್ಥೆಗೆ ತಲುಪಿತ್ತು. ಅದನ್ನು ಅಭಿವೃದ್ಧಿಪಡಿಸಲಾಗಿದೆ. ವಿಗ್ರಹಗಳು ಸೇರಿದಂತೆ ಇಡೀ ಉದ್ಯಾನವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು’ ಎಂದರು.

ADVERTISEMENT

ಸಾರ್ವಜನಿಕರ ಆಕ್ರೋಶ:ಇದಕ್ಕೂ ಮುನ್ನ ಗಾಂಧೀಜಿ ಪ್ರತಿಮೆಯ ಕೋಲು ಮುರಿದು ಬಿದ್ದಿರುವುದಕ್ಕೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಮೆ ಮುಂಭಾಗ ಜಿಲ್ಲಾಡಳಿತ ನಿರ್ಲಕ್ಷ್ಯ ಭಾವನೆ ತಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ‘ಇದು ಮದ್ಯವ್ಯಸನಿಗಳ ಕುಕೃತ್ಯ ಇರಬಹುದು’ ಎಂದು ಸಂದೇಹ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.