ADVERTISEMENT

‘ವರಮಹಾಲಕ್ಷ್ಮೀ’ಗೆ ಬೆಲೆ ಏರಿಕೆಯ ಬಿಸಿ..!

ವರ್ಷಧಾರೆಯಲ್ಲೂ ವಹಿವಾಟು; ದುಬಾರಿ ದುನಿಯಾದಲ್ಲಿ ಖರೀದಿಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 15:24 IST
Last Updated 8 ಆಗಸ್ಟ್ 2019, 15:24 IST
ವರಮಹಾಲಕ್ಮೀ ವ್ರತಾಚರಣೆಗಾಗಿ ಗುರುವಾರ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಖರೀದಿಗಾಗಿ ಜಮಾಯಿಸಿದ್ದ ಜನಸ್ತೋಮ
ವರಮಹಾಲಕ್ಮೀ ವ್ರತಾಚರಣೆಗಾಗಿ ಗುರುವಾರ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಖರೀದಿಗಾಗಿ ಜಮಾಯಿಸಿದ್ದ ಜನಸ್ತೋಮ   

ಮೈಸೂರು: ಶ್ರಾವಣ ಮಾಸದ ಎರಡನೇ ಶುಕ್ರವಾರ ನಡೆಯಲಿರುವ ವರಮಹಾಲಕ್ಷ್ಮೀ ವ್ರತಾಚರಣೆಯ ಹಬ್ಬಕ್ಕೆ, ಬೆಲೆ ಏರಿಕೆಯ ಬಿಸಿ ಗ್ರಾಹಕ ಸಮೂಹಕ್ಕೆ ಬಲವಾಗಿಯೇ ತಟ್ಟಿತು.

ವರಮಹಾಲಕ್ಷ್ಮೀ ಆರಾಧನೆಯಲ್ಲಿ ಪ್ರಮುಖವಾಗಿ ಬಳಸುವ ಪೂಜಾ ಸಾಮಗ್ರಿಗಳು, ಹೂವು, ಹಣ್ಣು ಬಲು ತುಟ್ಟಿಯಾಗಿದ್ದವು. ಮಧ್ಯಮ ವರ್ಗದ ಜನ ಖರೀದಿಗೆ ಹಿಂದೇಟು ಹಾಕುವ ಚಿತ್ರಣ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಗುರುವಾರ ಗೋಚರಿಸಿತು.

ನಸುಕಿನಿಂದಲೇ ಜಿಟಿಜಿಟಿ ಮಳೆ ಸುರಿಯಿತು. ಸುರಿಯುವ ವರ್ಷಧಾರೆಯಲ್ಲೇ ವಹಿವಾಟು ನಡೆಯಿತು. ಜನರು ಕಿಕ್ಕಿರಿದು ಖರೀದಿಸಿದರು. ಕೊಂಚ ಹೊತ್ತು ಮಳೆ ಬಿಡುವು ನೀಡುತ್ತಿದ್ದಂತೆ; ತಂಡೋಪ ತಂಡವಾಗಿ ಜನಸ್ತೋಮ ಮಾರುಕಟ್ಟೆಗೆ ಭೇಟಿ ನೀಡಿತು. ತಕ್ಷಣವೇ ವಿವಿಧ ವಸ್ತುಗಳ ಧಾರಣೆ ಏಕಾಏಕಿ ಗಗನಮುಖಿಯಾಗುತ್ತಿತ್ತು. ಇದು ಗ್ರಾಹಕರಲ್ಲಿ ಗೊಂದಲ ಮೂಡಿಸಿತು.

ADVERTISEMENT

ಎಲ್ಲವೂ ದುಬಾರಿ; ತೂಕದಲ್ಲೂ ಮೋಸ:

‘ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲವೂ ದುಬಾರಿಯಾಗಿವೆ. ದೇವರಾಜ ಮಾರುಕಟ್ಟೆಯ ಒಂದೊಂದು ಭಾಗದಲ್ಲಿ ಒಂದೊಂದು ಧಾರಣೆಯಿದೆ. ಎಲ್ಲಿ? ಏನು ಖರೀದಿಸಬೇಕು? ಎಂಬುದೇ ದ್ವಂದ್ವವಾಗಿ ಕಾಡಿತು. ಕಡಿಮೆ ದರ ಎಂದು ಖರೀದಿಸಿದರೆ ತೂಕದಲ್ಲಿ ಮೋಸವಾಗಿದೆ. ಖರೀದಿಸಿದ ಹಣ್ಣು ಉತ್ತಮವಾಗಿಲ್ಲ’ ಎಂದು ಪ್ರಕಾಶ್‌ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಹಲವು ವರ್ಷಗಳಿಂದ ಮನೆಯಲ್ಲಿ ವ್ರತಾಚರಣೆ ಮಾಡುತ್ತಿದ್ದೇವೆ. ಎಷ್ಟೇ ದುಬಾರಿಯಾದರೂ ವರಮಹಾಲಕ್ಷ್ಮೀಯ ಪೂಜಾ ಸಾಮಗ್ರಿ, ಹೂವು–ಹಣ್ಣು ಖರೀದಿಸಲೇಬೇಕು. ಇದನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ವ್ಯಾಪಾರಿಗಳು ಬೆಲೆ ಹೆಚ್ಚಿಸಿ ದುಬಾರಿ ದುನಿಯಾ ಸೃಷ್ಟಿಸಿಕೊಳ್ಳುತ್ತಾರೆ’ ಎಂದು ತಿಲಕ್‌ ನಗರದ ಗಂಗಾಧರ್ ತಿಳಿಸಿದರು.

ವರ್ತಕರ ಅಳಲು:‘ಹಬ್ಬದ ಸಂದರ್ಭ ಜಿಟಿಜಿಟಿ ಮಳೆ ಸಹಜ. ಆದರೆ ಈ ಬಾರಿ ಮಳೆಯದ್ದೇ ಅಬ್ಬರ. ಹಬ್ಬದ ವಹಿವಾಟಿಗಾಗಿ ₹ 50,000 ಬಂಡವಾಳ ಹಾಕಿರುವೆ. ಬಂಡವಾಳ ವಾಪಸ್ ಕೈ ಸೇರಿದರೆ ಸಾಕು ಎಂಬಂತಹ ವಾತಾವರಣವಿದೆ. ನಷ್ಟದ ಭೀತಿ ಬಲು ಕಾಡುತ್ತಿದೆ’ ಎಂದು ದೇವರಾಜ ಮಾರುಕಟ್ಟೆಯ ವ್ಯಾಪಾರಿ ನಾಗಮ್ಮ ಹೇಳಿದರು.

‘ಹೋದ ವರ್ಷ ಇದೇ ಹಬ್ಬದಲ್ಲಿ ಭರ್ಜರಿ ವಹಿವಾಟು ನಡೆಸಿದ್ದೆವು. ಈ ಬಾರಿಯೂ ನಿರೀಕ್ಷೆಯಿತ್ತು. ಆದರೆ ಎರಡ್ಮೂರು ದಿನದಿಂದ ಬಿಟ್ಟು ಬಿಡದಂತೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಹೂವು ನೆನೆದು ಹಾಳಾಗುತ್ತಿದೆ. ಇದರಿಂದ ನಷ್ಟವಾಗುತ್ತಿದೆ’ ಎಂದು ವಿ.ವಿ.ಮಾರುಕಟ್ಟೆಯಲ್ಲಿನ ಹೂವಿನ ವ್ಯಾಪಾರಿ ಶೋಭಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.