ADVERTISEMENT

‘ತಪ್ಪದ ಶೋಷಣೆ: ನಾಯಕರನ್ನು ಒಪ್ಪಲ್ಲ’

ರಾಜ್ಯ ರೈತ ಸಂಘದ ಅಧ್ಯಕ್ಷ ಎನ್‌.ಎಸ್‌.ವರ್ಮಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 12:14 IST
Last Updated 8 ಅಕ್ಟೋಬರ್ 2021, 12:14 IST

ಮೈಸೂರು: ‘ರೈತರನ್ನು ಶೋಷಿಸುವುದು ಇಂದಿಗೂ ತಪ್ಪದಾಗಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎನ್‌.ಎಸ್‌.ವರ್ಮಾ ಶುಕ್ರವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಯಾವೊಬ್ಬ ರೈತ ಮುಖಂಡನನ್ನು ನಂಬುವಂತಿಲ್ಲ. ಜಿಲ್ಲೆಯವರೇ ಆದ ವಿವಿಧ ರೈತ ಸಂಘಟನೆಗಳ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್‌ ಸಹ ರೈತರ ಹಿತ ರಕ್ಷಿಸುತ್ತಿಲ್ಲ. ರೈತರ ಕಾಳಜಿ ಯಾರೊಬ್ಬರಿಗೂ ಬೇಡವಾಗಿದೆ. ಇಬ್ಬರೂ ಮಧ್ಯವರ್ತಿಗಳಂತಾಗಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರ ವಿರುದ್ಧ ಅವರು ಗುಡುಗಿದರು.

‘ಬಗರ್ ಹುಕುಂ ಜಮೀನನ್ನು ಸಕ್ರಮಗೊಳಿಸಲು ಮುಖ್ಯಮಂತ್ರಿ ಮುಂದಾದರೂ; ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೇ ಯಾವೊಂದು ಕೆಲಸ ನಡೆಯದಾಗಿದೆ. ರೈತರನ್ನು ಸುಲಿಗೆ ಮಾಡುವವರೇ ಹೆಚ್ಚುತ್ತಿದ್ದಾರೆ’ ಎಂದು ವರ್ಮಾ ಕಿಡಿಕಾರಿದರು.

ADVERTISEMENT

‘ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಯಾರೊಬ್ಬರಿಗೂ ಬೇಕಿಲ್ಲ. ಎಲ್ಲಾ ಪಕ್ಷಗಳು ರೈತರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡಿವೆ. ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಲ್ಲಿ ವಿಫಲವಾಗಿವೆ. ರೈತರ ಸಾಲ ಮನ್ನಾ ಮಾಡದೆ ಸಬೂಬು ಹೇಳುತ್ತಿವೆ’ ಎಂದು ಅವರು ಗುಡುಗಿದರು.

‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದೆ. ಎಪಿಎಂಸಿ ಕಾಯ್ದೆ ಬಗ್ಗೆ ಕಾದು ನೋಡುತ್ತೇವೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಹೋರಾಟಗಾರರನ್ನು ನಮ್ಮ ಸಂಘಟನೆ ಒಪ್ಪುವುದಿಲ್ಲ. ಅದು ಅಡ್ಡ ಮಾರ್ಗದಲ್ಲಿ ನಡೆಯುತ್ತಿರುವ ಹೋರಾಟ’ ಎಂದು ವರ್ಮಾ ಹೇಳಿದರು.

ಹೆಬ್ರಿಯ ಸುರೇಶ್ ಪೂಜಾರಿ, ಸಂತೋಷ ಸಿ.ನಾಯಕ್, ಸುಧೀರ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.