ADVERTISEMENT

‘ದಂಡ’ದ ಭೀತಿ: ದಾಖಲೆಯತ್ತ ಸವಾರರ ಚಿತ್ತ

ಸಂಚಾರ ನಿಯಮ ಮತ್ತಷ್ಟು ಬಿಗಿ; ಮತ್ತೆ ಬಂತು ಹೆಲ್ಮೆಟ್‌ಗೆ ಬೇಡಿಕೆ, ಹೊಗೆ ತಪಾಸಣೆ ಕೇಂದ್ರಗಳಲ್ಲೂ ಕ್ಯೂ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 9:42 IST
Last Updated 12 ಸೆಪ್ಟೆಂಬರ್ 2019, 9:42 IST
ಬಿ.ಎಸ್.ನವೀನಾ 
ಬಿ.ಎಸ್.ನವೀನಾ    

ಮಡಿಕೇರಿ: ‘ಮೋಟಾರು ವಾಹನ ಕಾಯ್ದೆ ತಿದ್ದುಪಡಿ – 2019’ರ ಹೊಸ ನಿಯಮಾವಳಿಗಳು ರಾಜ್ಯ
ದಲ್ಲೂ ಜಾರಿಗೊಂಡಿದ್ದು ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲೂ ಸಂಚಲನ ಸೃಷ್ಟಿಸಿದೆ.

ಎಲ್ಲೆಡೆಯೂ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಆಗಲೇ ಜಿಲ್ಲೆಯ ಪೊಲೀಸರು ‘ದಂಡ’ ಪ್ರಯೋಗದತ್ತ ಕಾರ್ಯ ಪ್ರವೃತ್ತರಾಗಿದ್ದಾರೆ. ಉತ್ತರ ಕೊಡಗು ಭಾಗದಲ್ಲಿ ಪೊಲೀಸರ ಕಾರ್ಯಾಚರಣೆ ಆರಂಭವಾಗಿದೆ. ಈ ದಂಡದ ಮೊತ್ತ ಹೊರೆಯಾಗಿ ‘ಬರೆ’ ಎಳೆಯುತ್ತಿದೆ ಎಂದೂ ಚಾಲಕರು ನೋವು ತೋಡಿಕೊಳ್ಳುತ್ತಿದ್ದಾರೆ.

ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳು ದಂಡದ ಮೊತ್ತವನ್ನು ಇಳಿಸಿವೆ. ರಾಜ್ಯದಲ್ಲೂ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಬೇಕು ಎಂಬ ಆಗ್ರಹಗಳು ಕೊಡಗಿನಿಂದಲೂ ಕೇಳಿಬರುತ್ತಿವೆ

ADVERTISEMENT

ಹೆಲ್ಮೆಟ್ ರಹಿತ, ಡಿ.ಎಲ್‌ ರಹಿತ ಚಾಲನೆಗೆ ದುಬಾರಿ ದಂಡದ ಮೊತ್ತ ಕಟ್ಟಬೇಕು. ಹಾಗೆಯೇ ಹೊಗೆ ತಪಾಸಣೆ ಮಾಡಿಸಿ, ಅದರ ಪ್ರಮಾಣ ಪತ್ರವನ್ನು ಜತೆಗೆ ಇಟ್ಟುಕೊಳ್ಳದಿದ್ದರೆ ಅದಕ್ಕೂ ದಂಡ ಕಟ್ಟಬೇಕು.

ಸೆ.1ರಿಂದ ಸೀಟ್‌ ಬೆಲ್ಟ್‌ ಧರಿಸದೇ ವಾಹನ ಚಾಲನೆ, ಅಮಲು ಪದಾರ್ಥ ಸೇವಿಸಿ ವಾಹನ ಚಾಲನೆ, ಅತೀ ವೇಗದ ವಾಹನ ಚಾಲನೆ, ಅಪಾಯಕಾರಿ ವಾಹನ ಚಾಲನೆ, ಪರವಾನಗಿ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ಮಂದಿ ವಾಹನದಲ್ಲಿ ತೆರಳುವುದು, ದ್ವಿಚಕ್ರ ವಾಹನದಲ್ಲಿ ಓವರ್‌ ಲೋಡಿಂಗ್‌, ವಿಮಾ ಪಾಲಿಸಿ ಇಲ್ಲದಿರುವುದು, ಆಂಬುಲೆನ್ಸ್‌ಗೆ ದಾರಿ ಬಿಡದಿದ್ದರೂ ದಂಡ ಕಟ್ಬಬೇಕು. ಇನ್ನು ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿದರೆ ₹ 25 ಸಾವಿರ ದಂಡ, ಮೂರು ವರ್ಷ ಜೈಲು ಶಿಕ್ಷೆ, ಜತೆಗೆ ವಾಹನ ನೋಂದಣಿಯೂ ರದ್ದಾಗುವ ನಿಯಮಾವಳಿ ಜಾರಿಗೆ ತರಲಾಗಿದೆ. ಇದು ಸಂಚಲನಕ್ಕೆ ಕಾರಣವಾಗಿದೆ.

ಈಗ ಆರ್‌.ಟಿ.ಒ ಕಚೇರಿ, ಹೊಗೆ ತಪಾಸಣೆ ಕೇಂದ್ರ ಹಾಗೂ ಹೆಲ್ಮೆಟ್‌ ಅಂಗ
ಡಿಗಳತ್ತ ಜನಜಂಗುಳಿ ಕಂಡುಬರುತ್ತಿದೆ. ದಂಡಕ್ಕೆ ಹೆದರಿ ಹೆಲ್ಮೆಟ್‌ ಖರೀದಿಸಲು ಜನರು ಆಸಕ್ತಿ ವಹಿಸುತ್ತಿದ್ದಾರೆ.

ಆರ್‌.ಟಿ.ಒ ಕಚೇರಿಯತ್ತ ಚಾಲಕರು: ಮಡಿಕೇರಿಯಿಂದ ‘ಅಬ್ಬಿ’ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಆರ್‌.ಟಿ.ಒ ಕಚೇರಿಯಿದೆ. ಜಿಲ್ಲಾ ಕೇಂದ್ರದಿಂದ ಬಹುದೂರ ಕಚೇರಿಯಿದ್ದರೂ ಅತ್ತ ಚಾಲ
ಕರು ಡಿಎಲ್‌ ಮಾಡಿಸಿಕೊಳ್ಳಲು ತೆರಳುತ್ತಿದ್ದಾರೆ. ಸಾಲುಗಟ್ಟಿ ದಾಖಲೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.

ಆರ್‌.ಟಿ.ಒ ಸಿಬ್ಬಂದಿಗೂ ಈಗ ಬಿಡುವು ಇಲ್ಲದ ಕೆಲಸ. ಸೆಪ್ಟೆಂಬರ್ 1ರ ನಂತರ, ಚಾಲನಾ ಪರವಾನಗಿ ಮಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬರುತ್ತಿದ್ದಾರೆ ಎಂದು ಆರ್‌ಟಿಒ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಐಎಸ್‌ಐ ಹೆಲ್ಮೆಟ್‌ಗೆ ಬೇಡಿಕೆ: ನಗರದಲ್ಲಿ ಟ್ರಾಫಿಕ್‌ ನಿಯಮದಡಿ ಹೆಲ್ಮೆಟ್ ಧರಿಸದವರ ಮೇಲೆ ನಿಗಾ ವಹಿಸಲಾಗಿದೆ. ಅದರಲ್ಲೂ, ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಇರಬೇಕು ಎನ್ನುವ ನಿಯಮ ಕಡ್ಡಾಯವಿದೆ. ಐಎಸ್‌ಐ ಮುದ್ರೆಯ ಹೆಲ್ಮೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸಂಚಾರ ನಿಯಮಗಳನ್ನು ಕೊಡಗಿನವರು ಪಾಲಿಸುತ್ತಾರೆ. ಅದರಲ್ಲೂ ಸುರಕ್ಷಿತ ಹೆಲ್ಮೆಟ್‌ಗಳನ್ನೇ ಬಳಸುವ ಬಗ್ಗೆಯೂ ಈ ಹಿಂದೆ ಟ್ರಾಫಿಕ್‌ ಪೊಲೀಸರು ನಗರದಲ್ಲಿ ಜಾಗೃತಿ ಮೂಡಿಸಿದ್ದರು. ಇದರಿಂದ ಐಎಸ್‌ಐ ಮುದ್ರೆಗಳಿರುವ ಹೆಲ್ಮೆಟ್‌ಗಳನ್ನೇ ತರಿಸಲಾಗಿದೆ ಎಂದು ಹೆಲ್ಮೆಟ್‌ ವ್ಯಾಪಾರಿ ಕೆ.ಜೆ.ಜೋಸೆಫ್‌ ಮಾಹಿತಿ ನೀಡಿದರು.

ಹೆಲ್ಮೆಟ್ ಬೆಲೆಯೇನೂ ಹೆಚ್ಚಾಗಿಲ್ಲ. ಸದ್ಯ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಬೆಲೆ ₹ 700 ಆರಂಭವಾಗಲಿದೆ. ಸುರಕ್ಷತೆ ಬಯಸುವವರು ಉತ್ತಮ ಗುಣಮಟ್ಟದ ಹೆಲ್ಮೆಟ್‌ ಅನ್ನೇ ಕೊಂಡುಕೊಳ್ಳುತ್ತಿದ್ದಾರೆ ಎಂದು ಜೋಸೆಫ್‌ ಹೇಳಿದರು.

ಕೊಡಗಿಗೆ ಬರುವ ಪ್ರವಾಸಿಗರಿಗೂ ಈ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲಿ ಅನಾಹುತಗಳನ್ನು ತಪ್ಪಿಸಬಹುದು. ಜತೆಗೆ, ಸುರಕ್ಷಿತವಲ್ಲದ ಹೆಲ್ಮೆಟ್‌ಗಳಿಗೆ ಕಡಿವಾಣ ಹಾಕಬೇಕು ಎಂದೂ ಒತ್ತಾಯಿಸಿದರು.

ಸಂಚಾರಿ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ. ಆದರೆ, ಹೆಚ್ಚಿನ ಶುಲ್ಕ ವಿಧಿಸಿ ವಾಹನ ಸವಾರರ ಜೇಬಿಗೆ ಸರ್ಕಾರ ಕತ್ತರಿ ಹಾಕಿರುವುದು ಸರಿಯಲ್ಲ. ನಿಯಮದಲ್ಲಿ ಸಡಿಲಿಕೆ ಬೇಕಿದೆ ಎಂದು ಕಡಗದಾಳುವಿನ ಬೈಕ್ ಸವಾರ ಬಿ.ಎಸ್‌.ಯೋಗೇಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.