ADVERTISEMENT

ಅಕ್ರಮ ಮದ್ಯ ಮಾರಾಟಕ್ಕೆ ಸರ್ಕಾರದ ನೀತಿ ಕಾರಣ

ರಾಯಚೂರಿನಲ್ಲಿ ಚರಕ ಸಂಘಟನೆ ಮುಖಂಡ ಪ್ರಸನ್ನ ಹೆಗ್ಗೋಡು ಆರೋಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:43 IST
Last Updated 27 ಮಾರ್ಚ್ 2018, 10:43 IST
ರಾಯಚೂರಿನಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ನೇತೃತ್ವದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರು ನಡೆಸುತ್ತಿರುವ ಧರಣಿಯಲ್ಲಿ ಚರಕ ಸಂಘಟನೆ ಮುಖಂಡ ಪ್ರಸನ್ನ ಹೆಗ್ಗೋಡು ಸೋಮವಾರ ಪಾಲ್ಗೊಂಡಿದ್ದರು
ರಾಯಚೂರಿನಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ನೇತೃತ್ವದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರು ನಡೆಸುತ್ತಿರುವ ಧರಣಿಯಲ್ಲಿ ಚರಕ ಸಂಘಟನೆ ಮುಖಂಡ ಪ್ರಸನ್ನ ಹೆಗ್ಗೋಡು ಸೋಮವಾರ ಪಾಲ್ಗೊಂಡಿದ್ದರು   

ರಾಯಚೂರು: ಮದ್ಯ ಮಾರಾಟದಿಂದ ಸರ್ಕಾರವು ಹೆಚ್ಚು ಆದಾಯ ನಿರೀಕ್ಷೆ ಮಾಡುತ್ತಿರುವ ಕಾರಣದಿಂದ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗುತ್ತಿದೆ ಎಂದು ಚರಕ ಸಂಘಟನೆ ಮುಖಂಡ ಪ್ರಸನ್ನ ಹೆಗ್ಗೋಡು ಆರೋಪಿಸಿದರು.

ನಗರದ ಮಹಾತ್ಮಗಾಂಧಿ ಪ್ರತಿಮೆ ಎದುರು ಮದ್ಯ ನಿಷೇಧ ಆಂದೋಲನ ಕರ್ನಾಟಕ ನೇತೃತ್ವದಲ್ಲಿ ಮಹಿಳೆಯರು ಮದ್ಯ ನಿಷೇಧಕ್ಕೆ ಆಗ್ರಹಿಸಿ ನಡೆಸುತ್ತಿರುವ 71 ದಿನಗಳ ಧರಣಿಯಲ್ಲಿ ಸೋಮವಾರ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದರು.

ಮದ್ಯ ನಿಷೇಧಕ್ಕೆ ಒತ್ತಾಯಿಸಿ ರಾಜ್ಯದ ಎಲ್ಲ ಕಡೆಗಳಲ್ಲೂ ಮಹಿಳೆಯರು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಯಚೂರು ಜಿಲ್ಲೆಯ ಮಹಿಳೆಯರು ಬಹಳ ದಿಟ್ಟರಾಗಿದ್ದು, ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಈಗ 71 ದಿನಗಳ ಧರಣಿ ನಡೆಸುವ ತೀರ್ಮಾನವು ಎಲ್ಲರ ಗಮನ ಸೆಳೆದಿದೆ ಎಂದು ತಿಳಿಸಿದರು.

ADVERTISEMENT

ಮದ್ಯ ಮಾರಾಟ ನಿಷೇಧಿಸಿದರೆ ಅಕ್ರಮ ಮದ್ಯ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸರಿಯಲ್ಲ. ಈಗಾಗಲೇ ಮದ್ಯ ಮಾರಾಟ ನಿಷೇಧಿಸಿದ ರಾಜ್ಯಗಳಲ್ಲಿ ಶೇ 5 ರಷ್ಟು ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಆದರೆ, ಸರ್ಕಾರ ಪ್ರಣೀತ ಮದ್ಯ ಮಾರಾಟದಿಂದ ಆರೋಗ್ಯವಂತರು ಹಾಗೂ ವಿದ್ಯಾವಂತರೆಲ್ಲರೂ ಮದ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು ಹೇಳಿದರು.

ಅನೈತಿಕತೆಯಿಂದ ಗಳಿಸಿದ ಹಣವನ್ನು ನೈತಿಕ ಕೆಲಸಗಳಿಗೆ ಉಪಯೋಗಿಸುವುದನ್ನು ಮಹಾತ್ಮ ಗಾಂಧೀಜಿ ವಿರೋಧಿಸಿದ್ದರು. ಸರ್ಕಾರವು ಮದ್ಯ ನಿಷೇಧಿಸಿದರೆ, ಮದ್ಯ ಸೇವನೆ ಕೈಬಿಡುವಂತೆ ಜನರ ಮನವೊಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಎಂಎಸ್‌ಐಎಲ್‌ಗಳಿಗೆ ಮದ್ಯ ಮಾರಾಟದ ಗುರಿ ನೀಡುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ದಾರಿಯಾಗಿದೆ. ಮದ್ಯ ಮಾರಾಟದ ಹಣದಲ್ಲಿ ಸರ್ಕಾರ ನಡೆಸುತ್ತೇನೆ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯರ ನಿರ್ಧಾರ ನಾಚಿಕೆಗೇಡಿತನದ್ದು. ₹4 ಸಾವಿರ ಕೋಟಿ ಇದ್ದ ಮದ್ಯದ ವರಮಾನವು ಕಳೆದ ನಾಲ್ಕು ವರ್ಷಗಳಲ್ಲಿ ₹18 ಸಾವಿರ ಕೋಟಿಗೆ ತಲುಪಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ಬಿಹಾರ ಸೇರಿ ಇತರೆ ರಾಜ್ಯಗಳಲ್ಲಿ ಮದ್ಯ ನಿಷೇಧಿಸಲಾಗಿದೆ. ಮದ್ಯ ನಿಷೇಧಿಸಿದರೆ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತದೆ ಎನ್ನುವುದೆಲ್ಲ ಸುಳ್ಳು ಪ್ರಚಾರ. ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರ ಹಾಕಿಕೊಂಡು ಮದ್ಯ ಮಾರಾಟದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ಮದ್ಯ ನಿಷೇಧಕ್ಕೆ ಆಗ್ರಹಿಸಿ ಗ್ರಾಮೀಣ ಭಾಗದ ಮಹಿಳೆಯರು 35 ದಿನಗಳಿಂದ ಹೋರಾಡುತ್ತಿದ್ದರೂ ಯಾವುದೇ ಜನಪ್ರತಿನಿಧಿಯೂ ಸ್ಪಂದಿಸಿಲ್ಲ ಎಂದು ವಿಷಾದಿಸಿದರು.

ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಮದ್ಯ ನಿಷೇಧದ ಬಗ್ಗೆ ಉಲ್ಲೇಖಿಸಬೇಕು. ಎಲ್ಲ ಪಕ್ಷಗಳು ಈ ನಿರ್ಧಾರಕ್ಕೆ ಬದ್ಧರಾಗಬೇಕು. ಮದ್ಯ ನಿಷೇಧ ಘೋಷಣೆ ಮಾಡುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ತಿಳಿಸಿದರು.

ಸಂಘಟನೆ ಮುಖಂಡರಾದ ವಿದ್ಯಾ ಪಾಟೀಲ, ಅಭಯ್, ವಿ.ಎನ್.ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.