ADVERTISEMENT

ಅತಿಕ್ರಮಣ: ಎ.ಸಿ. ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 7:10 IST
Last Updated 3 ಫೆಬ್ರುವರಿ 2011, 7:10 IST

ಮಸ್ಕಿ:  ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿರುವ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿಕೊಂಡ ಕಟ್ಟಡಗಳ ತೆರವು ಕಾರ್ಯಾಚರಣೆ ಅರ್ಧಕ್ಕರ್ಧ ಪೂರ್ಣಗೊಂಡಿದ್ದು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಬುಧವಾರ ವೀಕ್ಷಿಸಿ ಪೂರ್ಣಗೊಳಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಹಳೆ ಬಸ್‌ನಿಲ್ದಾಣ, ಖಲೀಲ ವೃತ್ತ ಮತ್ತು ಸಂತೇ ಬಜಾರ ಜಾಗಗಳನ್ನು ವೀಕ್ಷಿಸಿದ ಅವರು ಕಾಮಗಾರಿ ಸ್ಥಗಿತಗೊಂಡಿದ್ದಕ್ಕೆ ಪಂಚಾಯಿತಿ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಸೂಚಿಸಿದರು.

ಪಟ್ಟಣದ ದುರುಗಮ್ಮ ದೇವಸ್ಥಾನದಿಂದ ಸಂತೆಬಜಾರಕ್ಕೆ ಹೋಗುವ ಮಾರ್ಗದಲ್ಲಿ ಸ್ಥಗಿತಗೊಂಡ ರಸ್ತೆ ವಿಸ್ತರಣೆಯನ್ನು  ವೀಕ್ಷಿಸಿದ ಘೋಷ್ ಈಗಾಗಲೇ ಗುರುತು ಹಾಕಿರುವವರೆಗೆ ಕಟ್ಟಡ ಕೆಡವಿ ರಸ್ತೆ ವಿಸ್ತರಿಸಲು  ತಿಳಿಸಿದರು.ಕೆಲ ಖಾಸಗಿ ಕಟ್ಟಡ ಮಾಲೀಕರು ವಿಸ್ತರಿಸಲು ಅಡ್ಡಿ ಪಡಿಸಿದ್ದರಿಂದ ವಿಸ್ತರಣೆ ಕಾಮಗಾರಿ ಸ್ಥಗಿತಗೊಂಡಿತ್ತು. ಅಕ್ರಮವಾಗಿ ರಸ್ತೆಗಳಲ್ಲಿ ನಿರ್ಮಿಸಿದ್ದ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಡಿಸೆಂಬರ 31 ಕ್ಕೆ ಕೊನೆಗೊಂಡಿದೆ.

ಮನವಿ: ರಸ್ತೆ ವಿಸ್ತರಿಸುವಾಗ  ಅಧಿಕಾರಿಗಳು ಸರಿಯಾದ ತೀರ್ಮಾನ ತೆಗೆದುಕೊಂಡಿಲ್ಲ. ಬರಿ ಖಾಸಗಿ ವ್ಯಕ್ತಿಗಳ ಕಟ್ಟಡಗಳನ್ನು ಕೆಡವಿದ್ದು ಸರ್ಕಾರಿ ಕಚೇರಿಗಳು ರಸ್ತೆ ಬದಿಗೆ ಹೊಂದಿಕೊಂಡಿದ್ದರೂ ಅವುಗಳನ್ನು ತೆಗೆಯದೆ ತಾರತಮ್ಯ ಮಾಡಿದ್ದಾರೆ ಎಂದು ಕಟ್ಟಡ ಕೆಡವಿದ ಖಾಸಗಿ ಮಾಲೀಕರು ಅಲವತ್ತುಕೊಂಡಿದ್ದಾರೆ.ನಮ್ಮ ಕಟ್ಟಡಗಳನ್ನು ತೆರವುಗೊಳಿಸಿದಂತೆ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ನಮಗೊಂದು ನ್ಯಾಯ ಸರ್ಕಾರಕ್ಕೆ ಒಂದು ನ್ಯಾಯ ಎಂಬಂತಾಗುತ್ತದೆ ಎಂದಿದ್ದಾರೆ.                                                                                                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.