ರಾಯಚೂರು: ಏಡ್ಸ್-ಎಚ್‌ಐಸಿ ಸೋಂಕಿತರು ಸೇರಿದಂತೆ ಹಲವು ರೋಗ ರುಜಿನಗಳಿಗೆ ತುತ್ತಾದವರಿಗೆ ಆತ್ಮಸ್ಥೈ ರ್ಯ ತುಂಬಿ ಮತ್ತೆ ಜೀವನೋಲ್ಲಾಸ ಮೂಡುವಂತೆ ಮಾಡುವ ಆಪ್ತ ಸಮಾಲೋಚಕರ ಕಾರ್ಯ ಗೌರವಾನ್ವಿತ ಸೇವೆ. ಇಂಥವರಿಗೆ ಸರ್ಕಾರವು ಸೌಲಭ್ಯ ಕಲ್ಪಿಸುವ ಜತೆಗೆ ಸೇವಾ ಭದ್ರತೆ ಕಲ್ಪಿಸಿದರೆ ಸಮಾಜಕ್ಕೆ ಅತ್ಯಂತ ಉಪಯುಕ್ತವಾಗುತ್ತದೆ ಎಂದು ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಎ. ಖಾಜಿ ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕ ವಿಭಾಗೀಯ ಮಟ್ಟದ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳ (ಐ.ಸಿ.ಟಿ.ಸಿ.) ಪ್ರಥಮ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ 650ಕ್ಕೂ ಹೆಚ್ಚು ಐ.ಸಿ.ಟಿ.ಸಿ. ಕೇಂದ್ರಗಳಿವೆ. 6 ಕೋಟಿ ಜನಸಂಖ್ಯೆಯಲ್ಲಿ ಶೇ 1ರಷ್ಟು ಜನ ಅಂದರೆ 6 ಲಕ್ಷ ಜನರಿಗೆ 650 ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಆಪ್ತ ಸಮಾಲೋಚನೆ ಅಸಾಧ್ಯ. ಆಪ್ತ ಸಮಾಲೋಚಕರ ನೇಮಕ ಅಗತ್ಯವಾಗಿದೆ ಎಂದರು.
ಆಪ್ತ ಸಮಾಲೋಚಕ ಪಾಮೇಶ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿ.ವಿ. ಪ್ರೊಫೆಸರ್ ಡಾ. ಎಂ.ಬಿ. ದಿಲ್‌ಶಾದ್, ಧಾರವಾಡದ ಕರ್ನಾಟಕ ವಿ.ವಿ. ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಅಮ್ಮಿನಭಾವಿ ಮಾತನಾಡಿದರು. ಸಮ್ಮೇಳನದ ಜಂಟಿ ಕಾರ್ಯದರ್ಶಿ ಸೋಮನಾಥ ರೆಡ್ಡಿ, ಶ್ಯಾಮಸನ್, ನಾಗರಾಜ ನಾಯಕ ವೇದಿಕೆಯಲ್ಲಿದ್ದರು. ಕೆ ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.