ರಾಯಚೂರು: ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 193 ಶಾಖೆಗಳಿದ್ದು, ಈ ಬ್ಯಾಂಕ್‌ಗಳಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಲಾಭ ಮತ್ತು ಸಹಾಯವಾಗಬೇಕು. ಅಂದಾಗ ಸಮಗ್ರ ಅಭಿವೃದ್ಧಿ ಆಶಯ ಸಾಕಾರಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಜಲ ನಿರ್ಮಲ ವಿಭಾಗ ಸಭಾಭವನದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಏರ್ಪಡಿಸಿದ್ದ ರಾಯಚೂರು ಜಿಲ್ಲೆಯ ವಾರ್ಷಿಕ ಸಾಲ ಯೋಜನೆ-2013-14ನ್ನು ಬಿಡುಗಡೆ ಮಾಡಿ ಮಾತಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಬ್ಯಾಂಕ್‌ಗಳ ಪಾತ್ರ ಬಹಳ ಮುಖ್ಯ. ರೈತರು, ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚು ಸಾಲ ದೊರಕಿಸಬೇಕು. ಉದ್ಯೋಗ, ಆರ್ಥಿಕ ಸ್ವಾವಲಂಬನೆ ಚಟುವಟಿಕೆಗೆ ಬ್ಯಾಂಕ್‌ಗಳು ಸಾಲ ಕಲ್ಪಿಸಿ ಪ್ರೋತ್ಸಾಹಿಸಬೇಕು. ಹೆಚ್ಚು ಉದ್ಯೋಗ ಸೃಷ್ಟಿಗೆ ಕೈಗಾರಿಕೆ ವಲಯಕ್ಕೂ ಸಾಲ ಕೊಡಬೇಕು ಎಂದರು.
ಬ್ಯಾಂಕ್‌ಗಳು ಒಳ್ಳೆಯ ಉದ್ದೇಶದಿಂದ ತಮ್ಮ ಇತಿಮಿತಿಯಲ್ಲಿ ಸಾಲ ಸೌಕರ್ಯ ಕಲ್ಪಿಸಿ ನೆರವಾಗುತ್ತವೆ. ಅದರ ಪ್ರಯೋಜನ ಪಡೆದು ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದು ಸಾಲ ಪಡೆದವರ ಹೊಣೆ. ಸಕಾಲಕ್ಕೆ ಸಾಲ ಮರುಪಾವತಿಯಿಂದ ಬ್ಯಾಂಕ್‌ಗಳ ಏಳ್ಗೆಗೆ ಸಹಕಾರಿಯಾದರೆ ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್‌ಗಳು ಶಿಕ್ಷಣ ಸಾಲ ಕೊಡುವಾಗ ವಿಳಂಬ ಮಾಡಬಾರದು. ಅಗತ್ಯವಿದ್ದಾಗ ತುರ್ತಾಗಿ ಸಾಲ ಕಲ್ಪಿಸಿದರೆ ಅನುಕೂಲವಾಗುತ್ತದೆ. ಇಲ್ಲದೇ ಸಾಲ ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ಬ್ಯಾಂಕ್‌ಗಳು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯ ವಾರ್ಷಿಕ ಸಾಲ ಯೋಜನೆಯಲ್ಲಿ ಶೇ 20ರಷ್ಟು ಸಾಲ ಪ್ರಮಾಣ ಹೆಚ್ಚಾಗಿದೆ. ಕೃಷಿ ಅಲ್ಲದೇ ಶಿಕ್ಷಣ ಮತ್ತು ಗೃಹ ಸಾಲಕ್ಕೆ ಪ್ರಾಮುಖ್ಯತೆ ಕೊಡಲಾಗಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಮಾತನಾಡಿ, ಬ್ಯಾಂಕ್‌ಗಳು ಮತ್ತು ಗ್ರಾಹಕರ ನಡುವೆ ಸಂಬಂಧ ಇನ್ನೂ ವೃದ್ಧಿಯಾಗಬೇಕು. ಬ್ಯಾಂಕ್‌ಗಳು ಕೊಡುವ ಸಾಲ ಪುಕ್ಕಟ್ಟೆ ಎಂಬ ಭಾವನೆ ಬಹುಪಾಲು ಜನರಲ್ಲಿದೆ. ಈ ಮನೋಭಾವ ಬದಲಾಗಬೇಕು.
ಪಡೆದ ಸಾಲ ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕ್‌ಗಳ ಉಳಿವು. ಬ್ಯಾಂಕ್‌ಗಳೂ ಕೂಡಾ ಸಾಲ ಕೊಡುವ ಪ್ರಕ್ರಿಯೆಯಲ್ಲಿ ಹತ್ತಾರು ಬಾರಿ ಅಲೆದಾಡಿಸಬಾರದು. ಸಾಕಷ್ಟು ಅಲೆದಾಡಿ ಸಾಲ ಪಡೆದ ವ್ಯಕ್ತಿ ಸಾಲ ಮರುಪಾವತಿ ಮಾಡುವಾಗ ಬ್ಯಾಂಕ್‌ನವರಿಗೆ ಸತಾಯಿಸುತ್ತಾನೆ. ಈ ಸಮಸ್ಯೆ ಹೋಗಲಾಡಬೇಕು ಎಂದರು.
ವಾರ್ಷಿಕ ನಿರ್ದಿಷ್ಟ ಗುರಿ ಸಾಧನೆಗೆ ಎಲ್ಲ ಬ್ಯಾಂಕ್‌ಗಳೂ ಒಂದೇ ರೀತಿಯ ಸಾಲ ಯೋಜನೆ ರೂಪಿಸಿ ಸಾಲ ಕೊಡುವುದಕ್ಕಿಂತ ಹೊಸ ರೀತಿಯ ಚಿಂತನೆ ಮಾಡಿ ಜನರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗುವ ಚಟುವಟಿಕೆ ವಲಯಕ್ಕೆ ಸಾಲ ಕಲ್ಪಿಸಬೇಕು ಎಂದು ಕೋರಿದರು.
ಆರ್‌ಬಿಐ ಸಹ ಪ್ರಧಾನ ವ್ಯವಸ್ಥಾಪಕ ವಿ ಶ್ರೀನಿವಾಸ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎನ್ ನಾರಾಯಣರಾಜು ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್‌ಬಿಎಚ್ ಪ್ರಾದೇಶಿಕ ಕಚೇರಿ ಸಹ ಪ್ರಧಾನ ವ್ಯವಸ್ಥಾಪಕ ಆರ್.ಜಿ ಹೆಬ್ಬಾಳಕರ್ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.