ADVERTISEMENT

ಇನ್ನೂ ಬಗೆಹರಿಯದ ಬಸ್ ನಿಲ್ದಾಣದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 8:35 IST
Last Updated 15 ಫೆಬ್ರುವರಿ 2012, 8:35 IST

ಜಾಲಹಳ್ಳಿ: ಕಳೆದ ವರ್ಷ ಸೆ. 17ರಂದು ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದನಂದಗೌಡರು ದೇವದುರ್ಗಕ್ಕೆ ಆಗಮಿಸಿದಾಗ ಅವರಿಂದ ಸ್ಥಳೀಯ ಬಸ್ ನಿಲ್ದಾಣವನ್ನು ತುರಾತುರಿಯಲ್ಲಿ ಉದ್ಘಾಟನೆ ಮಾಡಿಸಲಾಗಿತ್ತು.

ತದನಂತರ ಅದಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಶಾಸಕರು ಸೂಚಿಸಿದ್ದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿಲ್ದಾಣಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಕೆಲವು ಸಮಸ್ಯೆಗಳನ್ನು ಪರಿಹಾರ ಕಂಡುಕೊಂಡಿದ್ದರು. ಬಸ್ ನಿಲ್ದಾಣಕ್ಕೆ ಅಗತ್ಯವಾಗಿದ್ದ ವಿದ್ಯುತ್ ಸೌಕರ್ಯ ಒದಗಿಸಿ ಆವರಣದಲ್ಲಿ ಮಣ್ಣು ಹಾಕಿಸಿ ಕೈತೊಳೆದುಕೊಂಡಿದ್ದರು.

ಉದ್ಘಾಟನೆಯಾದ ನಂತರ ಬಸ್ ನಿಲ್ದಾಣದ ಸ್ಥಳವನ್ನು ತಮ್ಮ ಅಧೀನಕ್ಕೆ ಒಳಪಡಿಸಿಲ್ಲ ಎಂಬ ಕಾರಣಕ್ಕೆ ಅದಕ್ಕೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು ಎಂಬುದು ಕೇಳಿಬಂದಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ನಿಲ್ದಾಣದ ಜಾಗವನ್ನು ಕೆಎಸ್‌ಆರ್‌ಟಿಸಿಯ ಅಧೀನಕ್ಕೆ ನೋಂದಣಿ ಮಾಡಿಸಲಾಗಿದ್ದರೂ ಇಲ್ಲಿಯವರೆಗೂ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸುವ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ.
 
ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲು ತುರಾತುರಿಯಲ್ಲಿ ಅದಕ್ಕೆ ಅಳವಡಿಸಿದ್ದ ವಿದ್ಯುತ್ತನ್ನು ಈಗ ಹಣ ಸಂದಾಯ ಮಾಡಿಲ್ಲ ಎಂಬ ಕಾರಣಕ್ಕೆ ತೆಗೆದುಹಾಕಲಾಗಿದೆ. ಇದರಿಂದಾಗಿ ನಿಲ್ದಾಣ ಕಗ್ಗತ್ತಲೆಯಲ್ಲಿದೆ. ಅಲ್ಲದೇ ಬಸ್ ನಿಲ್ದಾಣ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಪ್ರಯಾಣಿಕರಿಗೆ ಅನುಕೂಲಕ್ಕೆ ಬಾರದಂತಾಗಿದೆ.

ಮೇಲ್ವಿಚಾರಕರು ಇಲ್ಲದಿರುವುದುರಿಂದ ಖಾಸಗಿ ವಾಹನಗಳು ನಿಲ್ದಾಣದ       ಒಳಗಡೆ ರಾಜರೋಷವಾಗಿ ಪ್ರವೇಶಿಸುವುದಷ್ಟೇ ಅಲ್ಲದೆ ಸರ್ಕಾರಿ ಬಸ್‌ಗಳ ಮುಂದೆಯೇ ಪ್ರಯಾಣಿಕರನ್ನು ಕರೆದೊಯ್ಯುವುದು ಸಾಮಾನ್ಯವಾಗಿದೆ. ಇದರಿಂದಾಗಿ ಸ್ಥಳೀಯ ಬಸ್  ನಿಲ್ದಾಣ       ರಾಜ್ಯದ ಮುಖ್ಯಮಂತ್ರಿಗಳಿಂದ  ಉದ್ಘಾಟನೆಯಾಗಿದ್ದರೂ ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.