ADVERTISEMENT

ಎ.ಪಾಪಾರೆಡ್ಡಿಗೆ ಟಿಕೆಟ್ ನೀಡಲು ಬಿಜೆಪಿ ಕಾರ್ಯಕರ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 5:44 IST
Last Updated 24 ಫೆಬ್ರುವರಿ 2018, 5:44 IST

ರಾಯಚೂರು: ನಗರ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡುವುದಾದರೆ ಎ.ಪಾಪಾರೆಡ್ಡಿ ಅವರಿಗೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಅವರಿಗೆ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.

‘25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಮನಿರ್ದೇಶನ ಮಾಡಲಾಗಿತ್ತು. ಆದರೆ, ಈಗ ಒಂದು ಗುಂಪಿನ ಮುಖಂಡರು ಕಡೆಗಣಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

2004ರಲ್ಲಿ ಎ.ಪಾಪಾರೆಡ್ಡಿ ಅವರು ಶಾಸಕರಾಗಿ ಆಯ್ಕೆಯಾಗಲು ಮೂಲ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಆದ್ದರಿಂದ ಪಾಪಾರೆಡ್ಡಿ ಅವರ ಬೆಂಬಲಿಗರೆಂದು ತಿಳಿದುಕೊಂಡು ಉದ್ದೇಶ ಪೂರ್ವಕವಾಗಿ ಪಕ್ಷದ ಸಭೆಗಳಿಗೆ ಆಹ್ವಾನಿಸದೆ ದೂರ ಇಟ್ಟಿದ್ದಾರೆ ಎಂದು ಅವರು ದೂರಿದರು.

ADVERTISEMENT

ಇದು ಪಕ್ಷದ ಬೆಳವಣಿಗೆಗೆ ಸೂಕ್ತವಲ್ಲ. ಮುಂದಿನ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಮಾರಕವಾಗಲಿದೆ. ಆದ್ದರಿಂದ ಮೂಲ ಕಾರ್ಯಕರ್ತರೆಲ್ಲರನ್ನೂ ಸಭೆಗಳಿಗೆ ಆಹ್ವಾನಿಸಬೇಕು. ಆಯಾ ವಾರ್ಡುಗಳಲ್ಲಿ ಜವಾಬ್ದಾರಿ ನೀಡಬೇಕು. ಇಲ್ಲದೇ ಹೋದರೆ ಪಕ್ಷದ ವರಿಷ್ಠ ನಾಯಕರಿಗೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಮಿಷನ್ 150 ಯಶಸ್ವಿಯಾಗಲು ಹಾಗೂ ನಗರ ಕ್ಷೇತ್ರಕ್ಕೆ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡುವುದಾದರೆ ಪಾಪಾರೆಡ್ಡಿ ಅವರಿಗೆ ನೀಡಬೇಕು ಎಂಬುದು ಸರ್ವಾನುಮತದ ಅಭಿಪ್ರಾಯವಾಗಿದೆ. ಆದಾಗ್ಯೂ ಬಿಜೆಪಿ ಸೂಚಿಸುವ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಜಿ.ಶೇಖರರೆಡ್ಡಿ, ಜಗನ್ನಾಥ ಕುಲಕರ್ಣಿ, ಎನ್.ಶ್ರೀನಿವಾಸರೆಡ್ಡಿ, ಸರ್ಜಾಪುರ ಭೀಮರೆಡ್ಡಿ, ವರಪ್ರಸಾದರೆಡ್ಡಿ, ಶ್ರೀನಿವಾಸ ಪತಂಗೆ, ಎಸ್‌.ವೆಂಟಕರೆಡ್ಡಿ, ಜನಾರ್ದನರೆಡ್ಡಿ, ಹನುಮಂತಪ್ಪ ನಾಯಕ, ಕೆ.ಖಂಡೆಪ್ಪ, ಬಿ.ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.