ADVERTISEMENT

ಕಡ್ಡೋಣಿ: ನೀರಿಗಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:45 IST
Last Updated 22 ಅಕ್ಟೋಬರ್ 2012, 5:45 IST
ಕಡ್ಡೋಣಿ: ನೀರಿಗಾಗಿ ಜನರ ಪರದಾಟ
ಕಡ್ಡೋಣಿ: ನೀರಿಗಾಗಿ ಜನರ ಪರದಾಟ   

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಕಡ್ಡೋಣಿ ಗ್ರಾಮದಲ್ಲಿ ಸಮರ್ಪಕವಾದ ನೀರು ಪೂರೈಸುವ ವ್ಯವಸ್ಥೆ ಇಲ್ಲದ ಕಾರಣ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ.

ಅಂತರ್ಜಲ ಕುಸಿದ ಪರಿಣಾಮ ಗ್ರಾಮಕ್ಕೆ ಸರಬರಾಜುಮಾಡುತ್ತಿದ್ದ ಬೋರ್‌ವೆಲ್‌ನಲ್ಲಿ ನೀರಿಲ್ಲದ ಕಾರಣ ಗ್ರಾಮದಲ್ಲಿ ಸರಿಯಾಗಿ ನೀರು ಸಿಗುತ್ತಿಲ್ಲ. ಈ ತೊಂದರೆಯನ್ನು ನೀಗಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ನಾಲ್ಕು ಕಡೆ ಬೋರ್ ಕೊರಸಲಾಯಿತು. ಆದರೆ ಅವುಗಳಲ್ಲಿ ನೀರು ಬಿದ್ದಿಲ್ಲ. ಭೂ ತಜ್ಞರು ತೋರಿಸಿದ ಕಡೆ ಬೋರ್ ಕೊರೆದಿಲ್ಲ. ಸಂಸ್ಥೆ ಸಿಬ್ಬಂದಿ ತಮ್ಮ ಮನ ಬಂದ ಕಡೆ ಬೋರ್‌ಗಳನ್ನು ಕೊರೆದಿದ್ದಾರೆ. ಕಾರಣ ಈ ಬೋರ್‌ವೆಲ್‌ಗಳಲ್ಲಿ ನೀರು ಬಿದ್ದಿಲ್ಲ ಎಂಬುದು  ಗ್ರಾಮಸ್ಥರ ಆರೋಪವಾಗಿದೆ.

ಮಳೆಯ ಅಭಾವದಿಂದ ಬಾವಿಯಲ್ಲಿ ನೀರಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಹೀಗಿರುವಾಗ ಬೇಸಿಗೆ ಕಾಲದ ಸ್ಥಿತಿ ಊಹಿಸಿದರೆ ಭಯವಾಗುತ್ತಿದೆ.

ಗ್ರಾಮದ ಗುಡಿಯ ಹತ್ತಿರವಿರುವ ಕೊಳವೆ ಬಾವಿಯ ಕೈ ಪಂಪು ಕೆಟ್ಟು ಒಂದು ವಾರವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಇನ್ನೂ ದುರಸ್ತಿ ಮಾಡಿಲ್ಲ. ಇದರಿಂದ ಸ್ವಲ್ಪವಾದರೂ ಸಹಾಯವಾಗುತ್ತದೆ. ಬರಗಾಲದಲ್ಲಿ ಅಧಿಕಮಾಸ ಎಂಬಂತೆ ಈ ಮೊದಲೇ ನೀರಿ ಅಭಾವವಿದೆ. ಇಂತಹದರಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದ ನೀರು ಸರಬರಾಜಿಗೆ ಮತಷ್ಟು ತೊಂದರೆ ಆಗುತ್ತಿದೆ.ನೀರು ಸರಬರಾಜು ಮಾಡುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ. ವಿದ್ಯುತ್ ಇದ್ದಾಗ ಸಿಬ್ಬಂದಿ ಇರುವುದಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಸಮಸ್ಯೆಗಳನ್ನು ನೀಗಿಸುವಲ್ಲಿ ವಿಫಲವಾಗಿದೆ.

2011-12ನೇ ಸಾಲಿನ ಎನ್‌ಆರ್‌ಡಬ್ಲ್ಯೂಡಿಪಿ ಯೋಜನೆಯಡಿಯಲ್ಲಿ ನಿರ್ಮಿಸಿದ ಕಿರು ನೀರು ಸರಬರಾಜು ಯೋಜನೆಯ ತೊಟ್ಟಿಗಳು ಹೆಸರಿಗೆ ಮಾತ್ರ ನಿರ್ಮಿಸಲಾಗಿದೆ. ಇಲ್ಲಿವರೆಗೆ ಇವುಗಳಿಂದ ಒಂದು ಹನಿ ನೀರು ಬಂದಿಲ್ಲ ಎಂದು ದೂರುತ್ತಾರೆ.

ಗೌಡೂರು ಗ್ರಾಮದ ಹತ್ತಿರವಿರುವ ನಾರಾಯಣಪುರ ಬಲ ದಂಡೆ ಕಾಲುವೆಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮದ ರಾಮನ್ ಗೌಡ, ಶಿವಪ್ಪ ಪೂಲ್‌ಬಾವಿ ಇತರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.