ADVERTISEMENT

ಕಾಂಗ್ರೆಸ್ ತೆಕ್ಕೆಗೆ ತಾಲ್ಲೂಕು ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:15 IST
Last Updated 11 ಫೆಬ್ರುವರಿ 2011, 7:15 IST

ರಾಯಚೂರು:  ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪಿ ಚಂದ್ರಶೇಖರರೆಡ್ಡಿ ಹಾಗೂ ಉಪಾಧ್ಯಕ್ಷೆಯಾಗಿ ಜಯಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. 12 ಸದಸ್ಯ ನಿಚ್ಚಳ ಬಹುಮತ ಹೊಂದಿದ್ದ ಕಾಂಗ್ರೆಸ್ ರಾಯಚೂರು ತಾಲ್ಲೂಕು ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಒಟ್ಟು 23 ಸದಸ್ಯ ಬಲದ ರಾಯಚೂರು ತಾಲ್ಲೂಕು ಪಂಚಾಯಿತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12, ಬಿಜೆಪಿ 6 ಹಾಗೂ ಜೆಡಿಎಸ್ ಪಕ್ಷ 5 ಸ್ಥಾನ ಗಳಿಸಿದ್ದವು.ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ-ಮಹಿಳೆಗೆ ಮೀಸಲು ನಿಗದಿಪಡಿಸಲಾಗಿತ್ತು.

ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ದಿನ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಹುದ್ದೆಗೆ ಜಾಗೀರ ವೆಂಕಟಾಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಪಿ ಚಂದ್ರಶೇಖರರೆಡ್ಡಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಮಟಮಾರಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್‌ನ ಸದಸ್ಯೆ ಜಯಮ್ಮ ಅವರು ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್‌ನ 12 ಸದಸ್ಯರು ಚುನಾವಣೆ ಪ್ರಕ್ರಿಯೆ ಆರಂಭದಿಂದಲೂ ಹಾಜರಿದ್ದರೆ, ಜೆಡಿಎಸ್‌ನ 5 ಸದಸ್ಯರು ಆಯ್ಕೆ ಪ್ರಕ್ರಿಯೆಯ ಕೊನೆಯ ಗಳಿಗೆಯಲ್ಲಿ ಸಭೆಗೆ ಹಾಜರಾದರು. ಬಿಜೆಪಿ ಪಕ್ಷದ 6 ಸದಸ್ಯರು ಗೈರು ಉಳಿದಿದ್ದರು.ಅಧ್ಯಕ್ಷ ಹುದ್ದೆಗೆ ಚಂದ್ರಶೇಖರರೆಡ್ಡಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಜಯಮ್ಮ ಅವರು ನಾಮಪತ್ರ ಸಲ್ಲಿಸಿದ್ದು ಬಿಟ್ಟರೆ ಮತ್ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣಾಧಿಕಾರಿ ಘೋಷಣೆ: ಅಂತಿಮವಾಗಿ ಚುನಾವಣಾಧಿಕಾರಿಗಳಾದ ಸಹಾಯಕ ಆಯುಕ್ತ ಡಿ.ಪಿ ಚವ್ಹಾಣ ಅವರು, ರಾಯಚೂರು ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜಾಗೀರವೆಂಕಟಾಪುರ ಕ್ಷೇತ್ರದ ಸದಸ್ಯ ಪಿ ಚಂದ್ರಶೇಖರರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಟಮಾರಿ ಕ್ಷೇತ್ರದ ಸದಸ್ಯೆ ಜಯಮ್ಮ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದ್ವಾರಕಾನಾಥ್ ಉಪಸ್ಥಿತರಿದ್ದರು.

ಶಾಸಕ ಯಾಸಿನ್, ಜಿಪಂ ಸದಸ್ಯರ ಅಭಿನಂದನೆ: ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶಾಸಕ ಸಯ್ಯದ್ ಯಾಸಿನ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಶಾಸಕರ ಅನುದಾನದಲ್ಲಿ ತಾಲ್ಲೂಕು ಪಂಚಾಯಿತಿಗೆ ಸಾಧ್ಯವಾದ ಎಲ್ಲ ರೀತಿಯ ನೆರವು ದೊರಕಿಸುವ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಬಷಿರುದ್ದೀನ್, ನಾಗೇಂದ್ರ ಮಟಮಾರಿ ಹಾಗೂ ಮತ್ತಿತರರಿದ್ದರು.

ವಿಜಯೋತ್ಸವ: ರಾಯಚೂರು ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಧ್ಯಕ್ಷ-ಉಪಾಧ್ಯಕ್ಷರ ಬೆಂಬಲಿಗರು ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.