ADVERTISEMENT

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಚಾರ

ಮನೆಮನೆಗೆ ತೆರಳಿ ಮತದಾರರ ಭೇಟಿ, ವಿವಿಧೆಡೆ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:40 IST
Last Updated 29 ಏಪ್ರಿಲ್ 2018, 13:40 IST

ಮಸ್ಕಿ: ಸುಡು ಬಿಸಿಲಿನ ತಾಪದ ನಡುವೆಯೂ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.

ಕಾಂಗ್ರೆಸ್ ಮತಯಾಚನೆ: ಕ್ಷೇತ್ರದ ಮಟ್ಟೂರು, ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಸಕ ಪ್ರತಾಪಗೌಡ ಪಾಟೀಲ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವಂತರಾಯ ಕುರಿ ಸೇರಿದಂತೆ ಹಲವಾರು ಮುಖಂಡರು ಶಾಸಕರ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತಯಾಚಿಸಿದರು.

ಅವರ ಮಾವ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಅವರು ತೀರ್ಥಭಾವಿ, ಮ್ಯಾದ್ರಾಳ ಮುಂತಾದ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು. ಶಾಸಕ ಪ್ರತಾಪಗೌಡ ಪಾಟೀಲರ ಅಳಿಯ, ಪುರಸಭೆ ಉಪಾಧ್ಯಕ್ಷ ರವಿಕುಮಾರ ಪಾಟೀಲ, ಅಧ್ಯಕ್ಷ ಮೌನೇಶ ಮುರಾರಿ ನೇತೃತ್ವದಲ್ಲಿ ಮೆದಿಕಿನಾಳ, ಕನ್ನಾಳದಲ್ಲಿ ಚುನಾವಣೆ ಪ್ರಚಾರ ನಡೆಸಿದರೆ, ಶಾಸಕರ ಪುತ್ರರಾದ ಪ್ರಸನ್ನ ಪಾಟೀಲ, ಚೇತನ ಪಾಟೀಲ ತಿಡಿಗೋಳ, ತುರ್ವಿಹಾಳ ಭಾಗದಲ್ಲಿ ಮತಯಾಚಿಸಿದರು.

ADVERTISEMENT

ಬಿಜೆಪಿ ಪ್ರಚಾರ: ಶಾಸಕ ಪ್ರತಾಪಗೌಡ ಪಾಟೀಲ ಅವರ ಆಡಳಿತ ವೈಫಲ್ಯ ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಬಳಗಾನೂರು, ತೋರಣದಿನ್ನಿ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕುಂಟಿತಗೊಂಡಿದ್ದು ಇದಕ್ಕೆ ಶಾಸಕ ಪ್ರತಾಪಗೌಡ ಪಾಟೀಲ ಅವರ ಆಡಳಿತ ವೈಫಲ್ಯವೇ ಕಾರಣ’ ಎಂದು ಆರೋಪಿಸಿದರು.

ಬಸನಗೌಡ ತುರ್ವಿಹಾಳ ಅವರ ಸಹೋದರ ಸಿದ್ಧನಗೌಡ ಪಾಟೀಲ ಮೆದಕಿನಾಳ, ತಿಡಿಗೋಳ ಭಾಗದಲ್ಲಿ ಪ್ರಚಾರ ನಡೆಸಿದರೆ, ಇನ್ನೊಬ್ಬ  ಸಹೋದರ ಹನುಮೇಶ ವಕೀಲ ಸಹ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಚಾರ ಕೈಗೊಂಡರು. ಬಿಜೆಪಿ ಮಸ್ಕಿ ನಗರ ಘಟಕದ ಅಧ್ಯಕ್ಷ ಅಪ್ಪಾಜಿಗೌಡ ಪಾಟೀಲ ನೇತೃತ್ವದ ತಂಡ ಸಂತೆಕೆಲ್ಲೂರು, ಕಾರಲಕುಂಟಿಯಲ್ಲಿ ಪ್ರಚಾರ ನಡೆಸಿತು. ಬಳಗಾನೂರಿನ ಸಿದ್ದನಗೌಡ ಬಂಗ್ಲಿ ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಜೆಡಿಎಸ್ ಮತಯಾಚನೆ: ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ವಿವಿಧೆಡೆ ಮತಯಾಚನೆ ನಡೆಸಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಜನಪರ ಕಾರ್ಯಕ್ರಮ ಮುಂದಿಟ್ಟು ಕೊಂಡು ಮತಯಾಚಿಸುತ್ತಿದ್ದಾರೆ.ರಾಜಾ ಸೋಮನಾಥ ನಾಯಕ ಅವರ ತಾಯಿ ಜಿಲ್ಲಾ ಪಂಚಾಯಿತಿ ಸದಸ್ಯೆ, ಗುರುಗುಂಟಾ ಸಂಸ್ಥಾನದ ರಾಣಿ ಜಯಲಕ್ಷ್ಮೀ ಅವರು ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಮತಯಾಚಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ ಹಂಚಿನಾಳ ಮತ್ತು ಮುಖಂಡರು ಮತಯಾಚನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.