ಹಟ್ಟಿ ಚಿನ್ನದ ಗಣಿ: ಸಮೀಪದ ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗೌಡೂರು ತಾಂಡದಲ್ಲಿ ಕಿರು ನೀರು ಸರಬರಾಜು ಯೋಜನೆ ಅಳವಡಿಕೆಯಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ನಿವಾಸಿಗಳು ದೂರುತ್ತಾರೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಕಿರು ನೀರು ಸರಬರಾಜು ಕಾಮಗಾರಿಯನ್ನು ತಾಂಡದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ತೀರ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಮಾಡಲಾಗಿದೆ. ನಿರ್ಮಿಸದ 15ದಿನಗಳಲ್ಲಿ ತೊಟ್ಟಿಗಳಿಗೆ ಅಳವಡಿಸಿದ ನಳಗಳು ಹಾಗೂ ಪೈಪ್‌ಗಳು ಕಿತ್ತಿ ಹೋಗಿವೆ. ಈ ತೊಟ್ಟಿಗಳಲ್ಲಿ ನೀರು ತುಂಬಿದರೆ ಎಲ್ಲಾ ನೀರು ಸೋರಿ ಹೋಗುತ್ತಿದೆ.
ಒಟ್ಟು 4 ನೀರಿನ ತೊಟ್ಟಿಗಳಲ್ಲಿ 3 ತೊಟ್ಟಿಗಳು ಮಾತ್ರ ಬೇಕಾಬಿಟ್ಟಿಯಾಗಿ ನಿರ್ಮಿಸಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಏನು ಪ್ರಯೋಜನವಾಗಿಲ್ಲ. ಹಳೆಯ ಪೈಪ್‌ಲೈನ್‌ನಿಂದ ಕಿರು ನೀರು ತೊಟ್ಟಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಹಳೆಯ ನೀರಿನ ಸರಬರಾಜು ವ್ಯವಸ್ಥೆ ಮೇಲೆ ಪರಿಣಾಮ ಬೀರಿ ತಾಂಡಾದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ.
ಈ ಹೊಸ ಯೋಜನೆಯಿಂದ ನೀರಿನ ಸಮಸ್ಯೆ ಮತಷ್ಟು ಉಲ್ಭಣಗೊಂಡಿದೆ. ಕಿರು ನೀರು ಯೋಜನೆಗಳ ತೊಟ್ಟಿಗಳಿಗೆ ಹೊಸ ಬೋರವೆಲ್ ಹಾಕಿಸಿ ಪ್ರತ್ಯೇಕ ಸಂಪರ್ಕ ಕಲ್ಪಿಸಿ ಕೊಡಬೇಕು. ಹಳೆಯ ಪೈಪ್‌ಲೈನ್‌ನಿಂದ ಸಂಪರ್ಕ ಕೊಡುವುದು ಬೇಡ ಎಂದು ನಿವಾಸಿಗಳಾದ ಚಂದಪ್ಪ, ವೆಂಕಟೇಶ, ಶಿವಪ್ಪ, ಮೇಘರಾಜ್, ಅಮರೇಶ, ಹಂಪಣ್ಣ, ರಾಮಜೀ ನಾಯಕ, ತಿಪ್ಪಣ್ಣ ನಾಯಕ ಹಾಗೂ ಪರಶುರಾಮ ರಾಠೋಡ್ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಜರುಗಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಕಳಪೆ ಕಾಮಗಾರಿ ಮಾಡಿದ ಸಂಬಂಧ ಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.