ADVERTISEMENT

`ಗ್ರಾಮೀಣಾಭಿವೃದ್ಧಿಗೆ ವಿಶೇಷ ಪ್ಯಾಕೇಜ್'

ವಿಷ ವರ್ತುಲದಲ್ಲಿ ಮುಗ್ಧಜನತೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:57 IST
Last Updated 18 ಜೂನ್ 2013, 10:57 IST

ಲಿಂಗಸುಗೂರ: ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಮುಗ್ಧ ಜನತೆ ಆರ್ಸೆನಿಕ್ ಎಂಬ ವಿಷಯುಕ್ತ ವಸ್ತು ಮಿಶ್ರಿತ ಕುಡಿಯುವ ನೀರಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುದ್ಧ ಕುಡಿಯುವ ನೀರು ಪೂರೈಸುವ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಹರಿದು ಬಂದಿದ್ದರು ಕೂಡ ಶುದ್ಧೀಕರಿಸುವ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಅಂತೆಯೆ ತಮ್ಮ ಸರ್ಕಾರ ವಿಷ ವರ್ತುಲದ ನಿರ್ಮೂಲನೆ ಸೇರಿದಂತೆ ಗ್ರಾಮೀಣಾಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಮಸ್ಕಿ, ಅಂಕುಶದೊಡ್ಡಿ, ಬಸ್ಸಾಪುರ, ಸಾನಬಾಳ, ಪಾಮನಕೆಲ್ಲೂರು, ಕವಿತಾಳ, ಚಿಂಚರಕಿ, ವಂದಲಿ, ಊಟಿ, ಹಟ್ಟಿ, ಪಲಕನಮರಡಿ, ಗೆಜ್ಜಲಗಟ್ಟಾ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಅತಿ ಹೆಚ್ಚು ಆರ್ಸೆನಿಕ್ ಹೆಚ್ಚಿನ ಪ್ರಮಾಣದಲ್ಲಿದೆ. ಅಂತೆಯೆ ಕೆಲ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ವಾಸ್ತವತೆ ಅರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ವಿಶೇಷ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದ ಜನತೆಗೆ ಅತ್ಯವಶ್ಯಕವಾದ ಶುದ್ಧ ಕುಡಿಯುವ ನೀರು, ಅಗತ್ಯತೆಗೆ ತಕ್ಕಷ್ಟು ಉದ್ಯೋಗ, ವಯೋವೃದ್ಧರು, ಅಂಗವಿಕಲರು ಸೇರಿದಂತೆ ಸಾಮಾನ್ಯರ ಅಗತ್ಯತೆಗೆ ತಕ್ಕಂತೆ ವಿಶಿಷ್ಟ ಮಾದರಿಯ ಶೌಚಾಲಯ, ದುಡ್ಡಿದು ಮುಪ್ಪಾಗಿ ಸಾಯುವ ಜೀವಿಗಳ ಮೃತದೇಹಗಳನ್ನು ಸ್ವಚ್ಛಂದ ಬಯಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸ್ವಚ್ಛಂದವಾದ ಬಯಲು ಅಥವಾ ಮುಕ್ತಿಧಾಮಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಚಿಂತನೆಗಳು ಸರ್ಕಾರದ ಮುಂದಿವೆ.

ಈಗಾಗಲೆ ಕೇಂದ್ರ ಸಚಿವರಿಗೆ ಗ್ರಾಮೀಣ ಸಮಸ್ಯೆಗಳ ವಾಸ್ತವ ಚಿತ್ರಣದ ಗಮನ ಸೆಳೆಯಲಾಗಿದೆ. ಕೇಂದ್ರ ಸರ್ಕಾರ ಕೂಡ ಪೂರಕ ಯೋಜನೆ ರೂಪಿಸಿ ಮುಗ್ಧ ಜನತೆಗೆ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾದರೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.

ಹೈದರಬಾದ ಕರ್ನಾಟಕ ವಿಶೇಷ ಸ್ಥಾನಮಾದ ಕಲಂ 371(ಜೆ) ಅನುಷ್ಠಾನದ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಈ ಭಾಗದ ಜನತೆ ಕನಸು ಸಾಕಾರಗೊಳಿಸುವ ನಿಯಮಾವಳಿ ಕರಡು ಸಿದ್ಧಪಡಿಸುವುದಾಗಿ ಭರವಸೆ ನೀಡಿದರು.

ಶಾಸಕರಾದ ಪ್ರತಾಪಗೌಡ ಪಾಟೀಲ, ಹಂಪನಗೌಡ ಬಾದರ್ಲಿ. ಮಾಜಿ ಸಚಿವ ಅಮರೆಗೌಡ ಪಾಟೀಲ ಬಯ್ಯಾಪೂರ. ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ. ಹಿರಿಯ ಮುಖಂಡ ಡಿ.ಎಸ್ ಹೂಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.