ADVERTISEMENT

ಜಲಾಶಯಕ್ಕೆ ಹೆಚ್ಚಿದ ಒಳ ಹರಿವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 8:55 IST
Last Updated 14 ಅಕ್ಟೋಬರ್ 2017, 8:55 IST
ಮಸ್ಕಿ ಜಲಾಶಯದ ಮೂರು ಗೇಟ್‌ಗಳ ಮೂಲಕ ಶುಕ್ರವಾರ ಹಳ್ಳಕ್ಕೆ ನೀರು ಬಿಡಲಾಗಿದೆ
ಮಸ್ಕಿ ಜಲಾಶಯದ ಮೂರು ಗೇಟ್‌ಗಳ ಮೂಲಕ ಶುಕ್ರವಾರ ಹಳ್ಳಕ್ಕೆ ನೀರು ಬಿಡಲಾಗಿದೆ   

ಮಸ್ಕಿ: ಸಮೀಪದ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು , ಹೆಚ್ಚಿನ ನೀರನ್ನು ಮಸ್ಕಿ ಹಳ್ಳಕ್ಕೆ ಬಿಡಲಾಗುತ್ತಿದೆ. ಶುಕ್ರವಾರ ಬೆಳಗಿನ ಜಾವ ಬುದ್ದಿನ್ನಿ ಕೆರೆ ಒಡೆದ ಕಾರಣ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ನಾಗಲಾಪುರ ಹಳ್ಳದಿಂದಲೂ ಹೆಚ್ಚಿನ ನೀರು ಬರುತ್ತಿದ್ದರಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ಜಲಾಶಯದ ಅಣೆಕಟ್ಟೆಯ ಮೂರು ಗೇಟ್‌ಗಳ ಮೂಲಕ 450 ರಿಂದ 500 ಕ್ಯೂಸೆಕ್‌ ನೀರು ಹಳ್ಳಕ್ಕೆ ಬಿಡಲಾಗಿದೆ.

ಹಳ್ಳಕ್ಕೆ ನೀರು ಬಿಡುತ್ತಿದ್ದರಿಂದ ಪ್ರವಾಹದ ಭೀತಿ ಉಂಟಾಗಿದೆ. ‘ಹಳ್ಳದ ದಂಡೆಯ ಮೇಲೆ ಬರುವ ಮಾರಲದಿನ್ನಿ, ಉಸ್ಕಿಹಾಳ, ಬೆಲ್ಲದಮರಡಿ, ದಿನ್ನಿಭಾವಿ, ಮಸ್ಕಿ, ಹುಲ್ಲೂರು, ಉದ್ಬಾಳ, ಬಳಗಾನೂರು ಮುಂತಾದ ಗ್ರಾಮಗಳ ಸಾರ್ವಜನಿಕರು, ರೈತರು ಹಳ್ಳಕ್ಕೆ ಇಳಿಯಬಾರದು’ ಎಂದು ಮಸ್ಕಿ ಜಲಾಶಯ ಯೋಜನೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಾವುದ್‌ ಸಾಬ್ ತಿಳಿಸಿದ್ದಾರೆ.

0.5 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದ ನೀರಿನ ಗರಿಷ್ಠ ಮಟ್ಟ 472.12 ಇದ್ದು, ಶುಕ್ರವಾರ ನೀರಿನ ಸಂಗ್ರಹ ಗರಿಷ್ಠ ಪ್ರಮಾಣ ಮುಟ್ಟಿದೆ. ಜಲಾಶಯದ ಮೇಲ್ಭಾಗದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಒಳ ಹರಿವು ಹೆಚ್ಚಿದೆ.

ADVERTISEMENT

ಬಹಳ ವರ್ಷಗಳ ಬಳಿಕ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಹಳ್ಳದ ಸೇತುವೆ ಮೇಲೆ ನಿಂತು ಸಾರ್ವಜನಿಕರು ವೀಕ್ಷಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಗುರುವಾರ ರಾತ್ರಿ ಮಸ್ಕಿ ಸುತ್ತಮುತ್ತ ಮಳೆಯಾಗಿದ್ದರಿಂದ ಮಟ್ಟೂರು, ಗಡ್ಡಿ ಹಳ್ಳ, ತಲೇಖಾನ ಹಳ್ಳ ಸೇರಿದಂತೆ ಪ್ರಮುಖ ಹಳ್ಳಗಳು ತುಂಬಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.