ADVERTISEMENT

ಜಾಲಹಳ್ಳಿ: ಬಸ್‌ನಿಲ್ದಾಣದಲ್ಲಿ ಖಾಸಗಿ ವಾಹನಗಳ ಕಾರುಬಾರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 5:40 IST
Last Updated 17 ಏಪ್ರಿಲ್ 2012, 5:40 IST

ಜಾಲಹಳ್ಳಿ: ಸೋಮವಾರ ಪಟ್ಟಣದಲ್ಲಿ ಸಂತೆ ನಡೆದಿದ್ದರಿಂದ ಸುತ್ತಮುತ್ತಲ ಹಳ್ಳಿಗಳ ಅನೇಕರು ತಮ್ಮ ಅಗತ್ಯ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬಂದಿದ್ದರಾದರೂ ಸರ್ಕಾರಿ ಬಸ್‌ಗಳ ಕೊರತೆಯಿಂದ ಸಾಕಷ್ಟು ಜನ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ಹಿಂತಿರುಗಲು ತೀವ್ರ  ತೊಂದರೆ ಪಡಬೇಕಾಯಿತು. 

 ಬಸ್‌ಗಾಗಿ ಕಾದು ಸುಸ್ತಾಗಿ ಕೊನೆಗೆ ಬೇರೆ ದಾರಿ ಇಲ್ಲದೇ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ  ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಕಾರುಬಾರು  ಜೋರಾಗಿತ್ತು. ಖಾಸಗಿ ವಾಹನಗಳು ಬಸ್ ನಿಲ್ದಾಣದ ಒಳಗಡೆ ಪ್ರವೇಶಿಸದಂತೆ ಕಡಿವಾಣ ಹಾಕಬೇಕಾಗಿದ್ದ ನಿಲ್ದಾಣದ ಮೇಲ್ವಿಚಾರಕರು ಸೋಮವಾರ ರಜೆಯ ಮೇಲೆ ತೆರಳಿದ್ದರಿಂದಾಗಿ ಖಾಸಗಿ ವಾಹನಗಳಿಗೆ ಕೇಳುವವರು ಇಲ್ಲದೇ ಬಸ್ ನಿಲ್ದಾಣದ ಒಳಗಡೆ ರಾಜಾರೋಷವಾಗಿ ಪ್ರವೇಶಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು.
 
ತಾಲ್ಲೂಕಿನಲ್ಲಿ ಬಸ್ ಡಿಪೋ ಇದ್ದರೂ ಇಲ್ಲದಂತಾಗಿದ್ದು ಸಾಕಷ್ಟು ವಾಹನಗಳು ಎಲ್ಲೆಂದರಲ್ಲಿ ಕೆಟ್ಟು ನಿಂತಿವೆ. ಅಲ್ಲದೇ ಡಿಪೋ ಮಂಜೂರಾಗಿ 4ವರ್ಷ ಕಳೆಯುತ್ತ ಬಂದರೂ ಇನ್ನೂ ಸಾಕಷ್ಟು ಹಳ್ಳಿಗಳು ಬಸ್ ಸೌಕರ್ಯದಿಂದ ವಂಚಿತವಾಗಿವೆ. ಮುಖ್ಯರಸ್ತೆಯ ಮೇಲೆ ಸಂಚರಿಸುವ ಬಸ್‌ಗಳಿಗೆ ಕೊರತೆ ಇದ್ದು ಇನ್ನು ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಒದಗಿಸುವುದು ದೂರದ ಮಾತಾಗಿದೆ. ಕಳೆದ ವರ್ಷ ದೇವದುರ್ಗ-ತಿಂಥಣಿ ಸೇತುವೆ ಮಾರ್ಗದಲ್ಲಿ ವೇಗದೂತ ಬಸ್‌ಗಳು ಸೇರಿದಂತೆ ಅನೇಕ ಬಸ್‌ಗಳ ವ್ಯವಸ್ಥೆ ಇತ್ತಾದರೂ ಈಗ ಕೆಲವೇ ಬಸ್‌ಗಳು ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. 

  ಅಗತ್ಯ ಪ್ರಮಾಣದಲ್ಲಿ ಬಸ್‌ಗಳನ್ನು ಒದಗಿಸಿ ಗ್ರಾಮೀಣ ಪ್ರದೇಶದ ಜನರೂ ಕೂಡ ಬಸ್ ಸೌಕರ್ಯ ಪಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ. ಜಾಲಹಳ್ಳಿ ಮಾರ್ಗವಾಗಿ ಸಾಕಷ್ಟು ಜನ ಬೆಂಗಳೂರಿಗೆ ಕೂಲಿ ಮಾಡಲು ಹೋಗುವುದು ಸಾಮಾನ್ಯವಾಗಿದ್ದು ಇಲ್ಲಿಂದ ನೇರವಾಗಿ ಬೆಂಗಳೂರಿಗೆ ಹೋಗಲು ಒಂದಾದರೂ ಬಸ್ ವ್ಯವಸ್ಥೆ ಇಲ್ಲವಾಗಿದೆ. 

 ಜಾಲಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ದೇವದುರ್ಗ-ಬೆಂಗಳೂರು ಬಸ್ಸನ್ನು ಕೂಡ ಅರಕೇರಾ ಮಾರ್ಗವಾಗಿ ಬಿಡಲಾಗಿದೆ. ಬೆಂಗಳೂರಿಗೆ ತೆರಳುವವರಿಗೆ ತೊಂದರೆಯಾದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.