ADVERTISEMENT

ಜೂನ್ 14-16: ಕಾರಹುಣ್ಣಿಮೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:05 IST
Last Updated 8 ಜೂನ್ 2011, 9:05 IST

ರಾಯಚೂರು: ಕಾರ ಹುಣ್ಣಿಮೆ ಅಂಗವಾಗಿ ಪ್ರತಿ ವರ್ಷ ಸಮಾಜವು ನಡೆಸುತ್ತ ಬಂದಿರುವ `ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ~ ಇದೇ ತಿಂಗಳು 14ರಿಂದ 16ರವರೆಗೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆಯಲಿದ್ದು, ಇಪ್ಪತ್ತೆರಡು ಲಕ್ಷ ರೂಪಾಯಿ ಈ ಹಬ್ಬಕ್ಕೆ ಖರ್ಚು ಮಾಡಲಾಗುತ್ತಿದೆ ಎಂದು ಮುನ್ನೂರು ಕಾಪು ಸಮಾಜದ ಮುಖಂಡ, ಮಾಜಿ ಶಾಸಕ ಹಾಗೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ. ಪಾಪಾರೆಡ್ಡಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನ ಸ್ಪರ್ಧೆ ನಡೆಯುವುದು. ಕರ್ನಾಟಕ, ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಆಕರ್ಷಕ ಬಹುಮಾನವನ್ನು ಸ್ಪರ್ಧೆ ಒಳಗೊಂಡಿದೆ ಎಂದು ಹೇಳಿದರು.

14ರಂದು ಕೇವಲ ರಾಯಚೂರಿನ ಮತ್ತು ಕರ್ನಾಟಕ ವಿವಿಧ ಭಾಗಗಳ ಎತ್ತುಗಳ ಸ್ಪರ್ಧೆ ನಡೆಯುವುದು. 15 ಮತ್ತು 16ರಂದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಾಗೂ ಇತರ ಭಾಗಗಳ ಎತ್ತುಗಳು ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಮೂರು ದಿನವೂ ಬೆಳಿಗ್ಗೆ 8ಕ್ಕೆ ಸ್ಪರ್ಧೆ ಆರಂಭವಾಗುವುದು ಎಂದರು.

14ರಂದು ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯುವುದು. ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 20 ಸಾವಿರ, ತೃತೀಯ ಬಹುಮಾನ 15 ಸಾವಿರ, ನಾಲ್ಕನೇ ಬಹುಮಾನ 10 ಸಾವಿರ, 5ನೇ ಬಹುಮಾನ 5 ಸಾವಿರ ನೀಡಲಾಗುತ್ತಿದೆ. 15ರಂದು 2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯುವುದು.

ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 35 ಸಾವಿರ, ತೃತೀಯ ಬಹುಮಾನ 25 ಸಾವಿರ, ನಾಲ್ಕನೇ ಬಹುಮಾನ 15 ಸಾವಿರ, 5ನೇ ಬಹುಮಾನ 10ಸಾವಿರ, 6ನೇ ಬಹುಮಾನ 5 ಸಾವಿರ ನೀಡಲಾಗುತ್ತಿದೆ ಎಂದು ಹೇಳಿದರು.
 
16ರಂದು ಕೊನೆಯ ದಿನ ಎರಡೂವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯುವುದು. ಇರಲ್ಲಿ ಪ್ರಥಮ ಬಹುಮಾನ 60 ಸಾವಿರ, ದ್ವಿತೀಯ ಬಹುಮಾನ 40 ಸಾವಿರ, ತೃತೀಯ ಬಹುಮಾನ 30 ಸಾವಿರ, ನಾಲ್ಕನೇ ಬಹುಮಾನ 20 ಸಾವಿರ, 5ನೇ ಬಹುಮಾನ 10 ಸಾವಿರ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಯಚೂರು ಪ್ರದೇಶ ಬಿಟ್ಟು ಬೇರೆ ಕಡೆಯಿಂದ, ಜಿಲ್ಲೆಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ಎತ್ತುಗಳ ಜೋಡಿಗೆ ಬಿಟ್ಟು ಉಳಿದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎತ್ತುಗಳ ಜೋಡಿಗೆ ಪ್ರೋತ್ಸಾಹಧನವಾಗಿ ನಾಲ್ಕು ಸಾವಿರ ನೀಡಲಾಗುತ್ತಿದೆ.

15ರಂದು ಸಂಜೆ ನಗರದ ಮುಖ್ಯ ರಸ್ತೆಯಲ್ಲಿ ಎತ್ತುಗಳ ಬೃಹತ್ ಮೆರವಣಿಗೆ ನಡೆಯುವುದು. ಕಲಾರೂಪಕ, ವೀರಗಾಸೆ, ಕತ್ತಿವರಸೆ, ಡೊಳ್ಳು ಕುಣಿತ, ಕಣಿಹಲಗೆ, ಕರಡಿ ಮಜಲು, ಜಗ್ಗಲಿಗೆ, ನಂದಿಧ್ವಜ, ಕಹಳೆ ವಾದನ, ಕೀಲು ಕುದುರೆ ಕುಣಿತ, ವೀರಭದ್ರ ಕುಣಿತ ಸೇರಿದಂತೆ ಹಲವಾರು ಕಲಾ ತಂಡಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಪಾಲ್ಗೊಳ್ಳುತ್ತಿವೆ.

ಎಲ್ಲ ರೈತರು ತಮ್ಮ ಎತ್ತುಗಳನ್ನು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ಎತ್ತುಗಳನ್ನು ಸಂಬಂಧಪಟ್ಟ ರೈತರು ಶೃಂಗರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.14ರಂದು ಸಂಜೆ 7ಕ್ಕೆ ಮುನ್ನೂರು ಕಾಪು ಸಮಾಜದ ನೂತನ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ನೃತ್ಯ ರೂಪಕವನ್ನು ಕರ್ನಾಟಕ, ರಾಜಸ್ತಾನ, ಮಣಿಪುರ, ಗುಜರಾತ್ ಕಲಾವಿದರು ನಡೆಸಿಕೊಡುವರು. 15ರಂದು ರಾತ್ರಿ 8ಕ್ಕೆ ಐಡಿಎಸ್‌ಎಂಡಿ ಬಡಾವಣೆ ಉದ್ಯಾನದಲ್ಲಿ, 16ರಂದು ವಾಸವಿನಗರ ಬಸ್ ನಿಲ್ದಾಣದ ಹತ್ತಿರ ಈ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

16ರಂದು ಸಂಜೆ 5ಕ್ಕೆ ರಾಜೇಂದ್ರ ಗಂಜ್‌ನಲ್ಲಿ ಕುಸ್ತಿ ಬಲ ಪ್ರದರ್ಶನ ನಡೆಯುವುದು. ದೆಹಲಿ, ಆಂಧ್ರ ಮತ್ತು ಕರ್ನಾಟಕದ ಕುಸ್ತಿಪಟುಗಳು ಪಾಲ್ಗೊಳ್ಳುವರು. ಅದೇ ದಿನ ಮಧ್ಯಾಹ್ನ 3ಕ್ಕೆ ಕಲ್ಲು ಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆಯು ಲಕ್ಷ್ಮಮ್ಮ ದೇವಸ್ಥಾನ ಹತ್ತಿರ ನಡೆಯಲಿದೆ. ಹಾವೇರಿ ಮತ್ತು ಗದಗ ಜಿಲ್ಲೆಯ ಟಗರು ಕಾಳಗ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಹನ್ನೊಂದು ವರ್ಷದಿಂದ: ಸತತ 11 ವರ್ಷಗಳಿಂದ ಈ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮುನ್ನೂರು ಕಾಪು ಸಮಾಜ ನಡೆಸಿಕೊಂಡು ಬರುತ್ತಿದೆ. ನಗರದ ಜನತೆ, ಸಂಘ ಸಂಸ್ಥೆಗಳ ಸಹಕಾರ ದೊರಕಿದೆ. ಹಟ್ಟಿ ಚಿನ್ನದ ಗಣಿ, ಕೆಪಿಟಿಸಿಎಲ್, ನಗರಸಭೆ, ಎಪಿಎಂಸಿ ಸೇರಿದಂತೆ ಹಲವು ಸಂಸ್ಥೆಗಳು ಈ ಹಬ್ಬಕ್ಕೆ ನೆರವು ಒದಗಿಸುತ್ತ ಬಂದಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.