ADVERTISEMENT

ದೇವರು ವರಕೊಟ್ಟರೂ ಪೂಜಾರಿ ಕೊಡಲಿಲ್ಲ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:35 IST
Last Updated 13 ಅಕ್ಟೋಬರ್ 2012, 9:35 IST

ದೇವದುರ್ಗ: ಕಳೆದ ಆಗಸ್ಟ್ 1ರಂದು ಜಿಲ್ಲಾಧಿಕಾರಿಗಳು ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ಆರಂಭಿಸಲಾಗುವುದು ಎಂಬ ಭರವಸೆಯಂತೆ ಒಂದು ಕೋಟಿ ರೂಪಾಯಿ ಹಣ ಸಹ ಮಂಜೂರು ಮಾಡಿದರೂ ಸ್ಥಳೀಯ ಅಧಿಕಾರಿಗಳು ಗೋಶಾಲೆ ಆರಂಭಕ್ಕೆ ಹಿಂದೇಟು ಹಾಕುತ್ತಿವುದರಿಂದ ದೇವರು ವರಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬ ಗಾದೆ ತಾಲ್ಲೂಕಿಗೆ ಅನ್ವಹಿಸುತ್ತದೆ.

ಮಳೆಯ ಅಭಾವದಿಂದಾಗಿ ಕಳೆದ ವರ್ಷ ಮತ್ತು ಈ ಬಾರಿ ಮುಂಗಾರು ವಿಫಲಗೊಂಡ ನಂತರ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಬಾರದು ಎಂಬ ಕಾರಣದಿಂದ ಆಗಷ್ಟ್ 1ರಂದು ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರು ಒಂದು ವಾರದೊಳಗೆ ದೇವದುರ್ಗ ಹೋಬಳಿ ಮತ್ತು ಅರಕೇರಾ ಹೋಬಳಿಯಲ್ಲಿ ಒಟ್ಟು ಎರಡು ಗೋಶಾಲೆ ಆರಂಭಿಸಬೇಕು ಹಣಕ್ಕೆ ಕೊರತೆ ಇಲ್ಲ ಎಂದು ಹೇಳುವ ಮೂಲಕ ಅಚ್ಟುಕಟ್ಟಾಗಿ ಗೋಶಾಲೆಗಳನ್ನು ಆರಂಭಿಸಲು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಎರಡು ತಿಂಗಳು ಕಳೆದರೂ ಗೋಶಾಲೆ ಆರಂಭವಾಗಿಲ್ಲ.

ಈ ಕುರಿತು ಜಿಲ್ಲಾಧಿಕಾರಿಗಳನ್ನು ವಿಚಾರಿಸಿದರೆ ಗೋಶಾಲೆಗಳ ಆರಂಭಕ್ಕೆ ತಾಲ್ಲೂಕಿಗೆ ಒಂದು ಕೋಟಿ ರೂಪಾಯಿ ಮಂಜೂರಾಗಿದೆ. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಕಳಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರೆ ಇತ್ತ ತಾಲ್ಲೂಕು ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಕಳಿಸಲಾಗಿದೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳುತ್ತಿರುವುದನ್ನು ನೋಡಿದರೆ ಈ ಬಾರಿ ಗೋಶಾಲೆ ಆರಂಭವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ಕಳೆದ ಎರಡು ತಿಂಗಳ ಹಿಂದೆಯೇ ದೇವದುರ್ಗ ಮತ್ತು ಅರಕೇರಾ ಎರಡು ಹೋಬಳಿಗಳಲ್ಲಿ ಗೋಶಾಲೆ ಆರಂಭವಾಗಿದ್ದರೆ ನೂರಾರು ಜಾನುವಾರಗಳಿಗೆ ಅನುಕೂಲವಾಗುತ್ತಿತ್ತು ಆದರೆ ನೀಡಿದ ಭರವಸೆ ಹುಸಿಯಾಗಿರುವುದರಿಂದ ದನಕರುಗಳ ಗೋಳು ಕೇಳವರು ಇಲ್ಲದಂತಾಗಿದೆ. ಅನಿವಾರ್ಯ ಎಂಬುವಂತೆ ತಾಲ್ಲೂಕಿನ ವಿವಿಧಕಡೆ ನಡೆಯುವ ದನಗಳ ಸಂತೆಗೆ ಮೇವಿನ ಕೊರತೆಯನ್ನು ತಾಳದೆ ರೈತರು ಜನುವಾರಗಳನ್ನು ಮಾರಾಟಕ್ಕೆ ಹಿಡಿಯುತ್ತಿರುವುದು ಕಂಡು ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.