ADVERTISEMENT

ನೀರಿಗಾಗಿ ದಲಿತರ ತತ್ವಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:50 IST
Last Updated 18 ಜುಲೈ 2013, 6:50 IST

ಸಿಂಧನೂರು: ತಾಲ್ಲೂಕಿನ ಗೋನಾಳ ಗ್ರಾಮದಲ್ಲಿರುವ ದಲಿತರಿಗೆ ಪ್ರತಿನಿತ್ಯ ಕುಡಿಯುವ ನೀರಿನದೇ ಚಿಂತೆ. ಬೆಳಗ್ಗೆಯಿಂದ ಸಂಜೆವರೆಗೆ ಕೂಲಿ ಕೆಲಸಕ್ಕೆ ಹೋಗುವ ಅವರಿಗೆ ಒಂದು ಕಿಲೋಮೀಟರ್ ದೂರದ ಹಳ್ಳದಿಂದ ಕುಡಿಯುವ ನೀರು ತರುವುದು ಕೆಲಸವಾಗಿ ಬಿಟ್ಟಿದೆ. ಶಾಲೆಗೆ ಹೋಗುವ ಮಕ್ಕಳನ್ನು  ಶಾಲೆ ಬಿಡಿಸಿ ನೀರು ತರಲೆಂದೇ ನಿಯೋಜಿಸಿದಂತಾಗಿದೆ.

ತುಂಗಭದ್ರಾ ಎಡದಂಡೆ ನಾಲೆಗೆ ಜು.20ಕ್ಕೆ ನೀರು ಬಿಡಲಾಗುತ್ತಿದ್ದು, ಹಳ್ಳದ ನೀರಿಗೂ ನಿರ್ಬಂಧ ಹೇರಲ್ಪಡುತ್ತದೆ. ಗ್ರಾಮದ ಮಹೇಶ ಧಣಿ ಎನ್ನುವವರ ಜಮೀನಿನಲ್ಲಿ ಹಳ್ಳ ಇದ್ದು, ಅದರಿಂದ ಬೇಸಿಗೆ ಹಾಗೂ ಬೆಳೆ ಇಲ್ಲದ ಸಮಯದಲ್ಲಿ ನೀರು ತರಲಾಗುತ್ತಿದೆ. ಕಾಲುವೆಗೆ ನೀರು ಬಂದ ತಕ್ಷಣ ನೀರು ತರುವ ಒರತೆ ನೆಲಸಮ ಮಾಡಿ ಬತ್ತ ನಾಟಿ ಮಾಡಲಾಗುತ್ತಿದೆ.

ನಂತರ ಪುನಃ ಬತ್ತದ ಬೆಳೆ ಬರುವವರೆಗೆ ಹಳ್ಳದ ನೀರಿಗೆ ಹೋಗಲು ದಾರಿಯಿಲ್ಲದಂತಾಗುತ್ತದೆ. ಗ್ರಾಮದಲ್ಲಿರುವ ಇತರೆ ಮೇಲ್ಜಾತಿ ಜನರಿಗೆ ಮೇರನಾಳ ಗ್ರಾಮದಿಂದ ಪೈಪ್‌ಲೈನ್ ಹಾಕಿ ಕೊಳವೆ ಬಾವಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ದಲಿತರು ಈ ನೀರಿನಿಂದ ವಂಚಿತರಾಗಿದ್ದಾರೆ. ಹಲವಾರು ವರ್ಷಗಳಿಂದ ಈ ಗ್ರಾಮದ ದಲಿತ ಕುಟುಂಬ ಇದೇ ಯಾತನೆಯನ್ನು ಅನುಭವಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲವೆಂದು ಗ್ರಾಮದ ದಲಿತ ಕಲಾವಿದ ಧರ್ಮರಾಜ ಗೋನಾಳ ಅವರು ವಿಷಾದದಿಂದ ಹೇಳುತ್ತಾರೆ.

ಕಳೆದ ಎರಡು ವರ್ಷದ ಹಿಂದೆ ಹಳ್ಳದಿಂದ ನೀರು ಪೂರೈಕೆಯಾಗುತ್ತಿತ್ತು. ಗ್ರಾಮ ಪಂಚಾಯಿತಿ ಸಿಬ್ಬಂದಿ ಮೋಟಾರ್ ರಿಪೇರಿ ಇದೆ, ದುರಸ್ತಿ ಮಾಡಿಕೊಂಡು ತರುತ್ತೇವೆಂದು ತೆಗೆದುಕೊಂಡು ಹೋದವರು ಮರಳಿ ಬಂದಿಲ್ಲ ಎಂದು ಧರ್ಮರಾಜ ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸಭೆ ನಡೆಸಲಾಗುತ್ತಿದ್ದು ಅಲ್ಲಿಗೆ ದಲಿತರಾಗಲಿ, ದಲಿತ ಮಹಿಳೆಯರಾಗಲಿ ದೇವಸ್ಥಾನಕ್ಕೆ ಬರುವುದು ದೂರದ ಮಾತು.. ಇಂತಹ ಪರಿಸ್ಥಿತಿಯಲ್ಲಿ ಗ್ರಾಮ ಸಭೆಯನ್ನು ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಗ್ರಾಮ ಸಭೆಯಲ್ಲಿ ಯಾವ ತೀರ್ಮಾನವಾಗಿದೆ ಎನ್ನುವುದೇ ತಮಗೆ ಗೊತ್ತಾಗುವುದಿಲ್ಲ ಎನ್ನುವುದು ದಲಿತರ ಆರೋಪ.

ತಮ್ಮ ಸಹನೆಯ ಕಟ್ಟೆ ಒಡೆಯುವ ಮುನ್ನ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಎಚ್ಚೆತ್ತು ಬೋರ್‌ವೆಲ್ ನೀರನ್ನು ಪೂರೈಕೆ ಮಾಡಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂಬುದು ದಲಿತರ ಒತ್ತಾಸೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.