ADVERTISEMENT

ನೀರಿಗಾಗಿ ಪುರತಿಪ್ಲಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 13:05 IST
Last Updated 18 ಜನವರಿ 2011, 13:05 IST

ರಾಯಚೂರು: ಗ್ರಾಮದಲ್ಲಿ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೂಡಲೇ ಪರಿಹರಿಸಬೇಕು. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ವಾಗಿಲ್ಲ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಪುರತಿಪ್ಲಿ ಗ್ರಾಮಸ್ಥರು ಹಾಗೂ ಹತ್ತಿ ಬೆಳೆಗಾರರ ಹೋರಾಟ ಸಮಿತಿ ಪದಾಧಿಕಾರಿಗಳು, ಕರವೇ( ಶಿವ ರಾಮೇಗೌಡ ಬಣ) ಕಾರ್ಯಕರ್ತರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೀರಿನ ಸಮಸ್ಯೆ ಹೋಗಲಾಡಿಸಲು 2008- 09ರಲ್ಲಿ 40 ಲಕ್ಷ ರೂ ಮೊತ್ತ ವೆಚ್ಚ ಮಾಡಿ ಕೆರೆ ನಿರ್ಮಿಸಲಾಗಿದೆ.ಆದರೆ ಅದಕ್ಕೆ ನೀರು ಸರಬರಾಜು ಕಾರ್ಯ ಮಾಡಿಲ್ಲ. ಲಕ್ಷಾಂತರ ಹಣ ಲೂಟಿ ಆಗಿದೆ. 2009-10ರಲ್ಲೂ ಕಿರು ನೀರು ಸರಬರಾಜು ಯೋಜನೆಯಡಿ 20 ಲಕ್ಷ ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸಲಾಗಿದೆ. 2 ಕೊಳವೆಯಲ್ಲಿ ಸಾಕಷ್ಟು ನೀರಿದ್ದರೂ ನೀರು ಪೂರೈಕೆ ಮಾತ್ರ ಆಗುತ್ತಿಲ್ಲ. ಗ್ರಾಮಸ್ಥರು ನೀರಿಗೆ ಪರದಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ಆಡಳಿತ ಯಂತ್ರ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಅಧಿಕಾರಿಗಳು ಅವ್ಯವಹಾರ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.ಹತ್ತಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಪಿ ಚನ್ನಯ್ಯ ನಾಯಕ, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ತಾಲ್ಲೂಕು ಅಧ್ಯಕ್ಷ ಬಿ ನಾಗೇಶ ಹಾಗೂ ಪುರತಿಪ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.