ADVERTISEMENT

ನೀರು ನಿಲ್ಲಿಸಲು ಚಾಮರಸ ಆಗ್ರಹ

ಕಾವೇರಿ ಹೋರಾಟ- ರೈತ ಮುಖಂಡರನ್ನು ಬಿಡುಗಡೆ ಮಾಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:37 IST
Last Updated 8 ಡಿಸೆಂಬರ್ 2012, 6:37 IST

ರಾಯಚೂರು: ತಮಿಳು ನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ತಕ್ಷಣ ಬಂದ್ ಮಾಡಬೇಕು.  ಹೋರಾಟಗಾರರಾದ ರೈತ ಮುಖಂಡರಾದ ಮಾದೇಗೌಡ, ರೈತ ಸಂಘದ ನಾಯಕ ಪುಟ್ಟಣ್ಣಯ್ಯ ಅವರು ಸೇರಿದಂತೆ ಅನೇಕರ ಬಂಧನ ಖಂಡನೀಯವಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ನಾಡಿಗೆ ಈಗ ಹರಿಸುತ್ತಿರುವ 10 ಸಾವಿರ ಕ್ಯುಸೆಕ್ ನೀರು ಬಂದ್ ಮಾಡಬೇಕು. ರಾಜ್ಯದ ರೈತರ ಹಿತ ಬಲಿಕೊಟ್ಟು ರಾಜ್ಯ ಸರ್ಕಾರವು ತಮಿಳು ನಾಡಿಗೆ ಸುಪ್ರೀಂ ಕೋರ್ಟ್ ಆದೇಶ ಪಾಲನೆ ನೆಪದಲ್ಲಿ ನೀರು ಬಿಟ್ಟಿರುವುದು ಖಂಡನೀಯ. ತಕ್ಷಣ ನೀರು ಹರಿಸುವುದನ್ನು ಬಂದ್ ಮಾಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಇಲ್ಲದೇ ಇದ್ದರೆ  ಆ ಭಾಗದ ರೈತರು, ಸಂಘಟನೆಗಳ ಹೋರಾಟದ ದಿಕ್ಕೆ ಬದಲಾಗುತ್ತದೆ. ಅಂಥದ್ದಕ್ಕೆ ರಾಜ್ಯ ಸರ್ಕಾರ ಆಸ್ಪದ ಕೊಡಬಾರದು ಎಂದು ಒತ್ತಾಯ ಮಾಡಿದರು.

ತಮಿಳು ನಾಡು ಸರ್ಕಾರಕ್ಕೆ ಕಾವೇರಿ ನದಿ ನೀರಿನ ಸ್ಥಿತಿ ಅರಿವಿಲ್ಲ. ಕೇಂದ್ರ ಸರ್ಕಾರಕ್ಕೆ ವಿವಾದ ಪರಿಹರಿಸುವುದು ಬೇಕಿಲ್ಲ. ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು, ಜಲಾಶಯದಲ್ಲಿನ ನೀರು ಸಂಗ್ರಹ ವಾಸ್ತವ ಅಂಶ ಗಮನಿಸದೇ ತಮಿಳು ನಾಡಿಗೆ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗುತ್ತದೆ ಎಂದು ಹೇಳಿದರು.

ಮಂಡ್ಯ, ಮೈಸೂರು ಆ ಭಾಗದಲ್ಲಿ 4 ಲಕ್ಷ ಎಕರೆಯಲ್ಲಿ ಕಬ್ಬು ಬೆಳೆದು ನಿಂತು ನೀರಿಗಾಗಿ ಕಾದಿದೆ. ಇತರೆ ಬೆಳೆ ಸೇರಿ 9 ಲಕ್ಷ ಎಕರೆಗೆ ನೀರು ಬೇಕಾಗಿದೆ. ಅದೇ ರೀತಿ ಬೆಂಗಳೂರು, ಮೈಸೂರು, ಮಂಡ್ಯ ನಗರಕ್ಕೆ ಕುಡಿಯಲು ನೀರು ಬೇಕು. ತಮಿಳು ನಾಡು ನೀರು ಕೇಳಿದೆ ಎಂಬ ಕಾರಣಕ್ಕೆ ರಾತ್ರೋ ರಾತ್ರಿ ನೀರು ಹರಿಸಿದ ಸರ್ಕಾರವು ಈ ಯಾವ ಸಮಸ್ಯೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಕಾವೇರಿ ವಿವಾದ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳದೇ ಕಾಲ ಹರಣ ಮಾಡುತ್ತಿದ್ದರೆ, ವಿರೋಧ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ರೈತಪರ, ನಾಡಿನ ಜನರ ಕುಡಿಯುವ ನೀರಿನ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. `ಕಾವೇರಿ' ನದಿ ನೀರಿನ ವಿಚಾರವನ್ನು ರಾಜಕೀಯ ಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದುವರಿಸಿದರೆ ಆ ಭಾಗದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಜಲಾಶಯದಿಂದ ನೀರು ಹರಿಸುವುದನ್ನು ತಕ್ಷಣ ಬಂದ್ ಮಾಡದೇ ಇದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದರು. ಸಂಘಟನೆ ಮುಖಂಡ ನರಸಿಂಹರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.